ಹೃದಯವಂತಿಕೆಯ ಗುಣ

4-679faf2204a4d
Published on
| ಗುರುನಾಥ ಸುತಾರ. ಹುಲ್ಯಾಳ

ಅದೊಂದು ಗುರುಕುಲ. ಹತ್ತಾರು ಶಿಷ್ಯಂದಿರು ಗುರುಕುಲದ ಪೂಜ್ಯರಲ್ಲಿ ಅಧ್ಯಯನ ಮಾಡುತ್ತಿದ್ದರು. ಧಾರ್ವಿುಕ, ಆಧ್ಯಾತ್ಮಿಕ ಹಾಗೂ ಯೋಗಿಕ ಜ್ಞಾನವನ್ನು ಗುರುಗಳು ಶಿಷ್ಯರಿಗೆ ಬೋಧಿಸುತ್ತಿದ್ದರು. ಬಹುತೇಕ ಎಲ್ಲ ಶಿಷ್ಯರು ಗುರುಗಳು ಹೇಳುವುದನ್ನು ಥಟ್ಟನೆ ಅರ್ಥೈಸಿಕೊಳ್ಳುತ್ತಿದ್ದರು. ಆದರೆ ಆನಂದ ಎಂಬ ಶಿಷ್ಯನಿಗೆ ಮಾತ್ರ ಗುರುಗಳು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಗುರುಗಳು ಆತನಿಗೆ ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಹುತೇಕ ಆನಂದನ ಗೆಳೆಯರು ಈತನಿಗೆ ‘ಮಹಾ ಪೆದ್ದ’ ಎಂದು ಕರೆಯುತ್ತಿದ್ದರು. ಆನಂದ ವಿದ್ಯಾಬುದ್ಧಿಯಲ್ಲಿ ದಡ್ಡ ಇರಬಹುದು, ಆದರೆ ಆತನ ಹೃದಯವಂತಿಕೆ ಮಾತ್ರ ಗುರುಗಳಿಗೆ ಇಷ್ಟವಾಗಿತ್ತು. ಈ ಕಾರಣಕ್ಕಾಗಿ ಎಲ್ಲ ಶಿಷ್ಯಂದಿರಿಗಿಂತಲೂ ಆತನ ಮೇಲೆ ಗುರುಗಳು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು.

ಒಂದು ದಿನ ಎಲ್ಲ ಶಿಷ್ಯರು ಕೂಡಿ ‘ಆನಂದ ತುಂಬಾ ಪೆದ್ದ ಎಂದು ಗೊತ್ತಿದ್ದರೂ ಹೀಗೇಕೆ ನಮ್ಮನ್ನು ನಿರ್ಲಕ್ಷಿಸಿ ಆನಂದನನ್ನು ಹೆಚ್ಚು ವಿಶ್ವಾಸದಿಂದ ಕಾಣುತ್ತೀರಿ ಗುರುಗಳೇ’ ಎಂದು ಪ್ರಶ್ನಿಸಿದರು. ಆಗ ಗುರುಗಳು ‘ಸಮಯ ಬಂದಾಗ ಅದನ್ನು ಹೇಳುತ್ತೇನೆ’ ಎಂದರು. ಕೆಲವು ದಿನಗಳ ನಂತರ ಗುರುಗಳ ಕಾಲಿನಲ್ಲಿ ಒಂದು ಹುಣ್ಣು ಬೆಳೆಯುತ್ತದೆ. ಅದು ಮಾರಣಾಂತಿಕವಾದ್ದರಿಂದ, ಎಲ್ಲರೂ ಚಿಂತಿತರಾಗುತ್ತಾರೆ. ನೋವು ಉಲ್ಬಣಗೊಂಡಾಗ ವೈದ್ಯರನ್ನು ಕರೆಸುತ್ತಾರೆ. ‘ಯಾರಾದರೊಬ್ಬರು ಬಾಯಿಯಿಂದ ಕಚ್ಚಿ ಕೀವು ಹೊರತೆಗೆದರೆ ಗುರುಗಳು ಗುಣಮುಖರಾಗುತ್ತಾರೆ’ ಎಂದು ವೈದ್ಯರು ತಿಳಿಸುತ್ತಾರೆ. ಬಹುತೇಕ ಶಿಷ್ಯರು ಈ ಕೆಲಸದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ಆನಂದ ಮುಂದೆ ಬಂದು ಗುರುಗಳ ಕಾಲು ನೇವರಿಸುತ್ತಾ, ಬೇರೆಯವರು ಮಾಡಲು ಹಿಂಜರಿದ ಕೆಲಸವನ್ನು ಸಂತೋಷದಿಂದ ಮಾಡುತ್ತಾನೆ. ಗುರುಗಳು ನಸುನಗುತ್ತಾರೆ. ಅವರ ಮುಖದಲ್ಲಿ ನಗೆ ಮೂಡಿದ್ದರಿಂದ ಸೋಜಿಗಗೊಂಡ ಇತರರು ಏಕೆಂದು ವಿಚಾರಿಸುತ್ತಾರೆ. ಆಗ ಗುರುಗಳು, ‘ನಾನು ಪಕ್ವಗೊಂಡ ಮಾವಿನ ಹಣ್ಣನ್ನು ಕಾಲಿಗೆ ಕಟ್ಟಿಕೊಂಡಿದ್ದೇನೆ. ಆನಂದನ ಹೃದಯವಂತಿಕೆಯನ್ನು ಉಳಿದೆಲ್ಲ ಶಿಷ್ಯರಿಗೆ ಪರಿಚಯಿಸಲು ಈ ನಾಟಕ ಮಾಡಿದೆ’ ಎನ್ನುತ್ತಾರೆ. ಹೃದಯವಂತಿಕೆಯ ಮಹತ್ವ ಹಾಗೂ ಅದರ ಬೆಲೆ ಎಲ್ಲ ಶಿಷ್ಯರಿಗೆ ಮನವರಿಕೆಯಾಗಿ, ತಮ್ಮ ತಪ್ಪನ್ನು ಕ್ಷಮಿಸಬೇಕೆಂದು ಗುರುಗಳಲ್ಲಿ ಮೊರೆಯಿಡುತ್ತಾರೆ.

ಬದುಕಿನಲ್ಲಿ ಹೀಗೆ ಅನೇಕರು ಅನೇಕ ಬಗೆಯ ಮಾತುಗಳನ್ನಾಡುತ್ತಾರೆ. ಅದರಲ್ಲೇ ಹೃದಯಶ್ರೀಮಂತಿಕೆ ತೋರುತ್ತಾರೆ. ಆದರೆ ನಿಜವಾದ ಹೃದಯವಂತಿಕೆ ನಮ್ಮ ಮಾತಿನಲ್ಲಿ ಇರುವುದಿಲ್ಲ. ನೊಂದವರ ಕಣ್ಣೀರು ಒರೆಸುವುದರಲ್ಲಿ ಇರುತ್ತದೆ. ನೋಂದ ಜೀವಿಗಳ ಬಗ್ಗೆ ನಾವು ತೋರುವ ಔದಾರ್ಯತೆಯೇ ಹೃದಯಶ್ರೀಮಂತಿಕೆಗೆ ಹಿಡಿದ ಕನ್ನಡಿಯಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು, ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net