ಹೂವು ಮತ್ತು ಟಮೆಟೋ ಬೆಲೆ ಕುಸಿತ / ಚೆಂಡು ಹೂವನ್ನು ರಸ್ತೆಗೆ ಸುರಿದ ರೈತರು / ಸೇವಂತಿಗೆಯನ್ನು ತೋಟಗಳಲ್ಲಿಯೇ ಬಿಟ್ಟ ರೈತರು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಮುಗಿಯುತ್ತಿದ್ದಂತೆ ಹೂವುಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ಜೊತೆಗೆ ಟಮೆಟೋ ಬೆಲೆಯು ಕುಸಿದಿರುವ ಕಾರಣ ಬೆಳೆಗಾರರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತೋಟಗಾರಿಕಾ ಬೆಳೆಗಳ ಜೊತೆಗೆ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯಲು ಹೆಚ್ಚಿನ ರೈತರು ಹೂ ಬೆಳೆಯತ್ತ ಮುಖ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಹೂ ಬೆಳೆಯ ವಿಸ್ತೀರ್ಣವು ಜಿಲ್ಲೆಯಲ್ಲಿ ಏರಿಕೆಯಾಗುತ್ತಿದೆ. ಹೂವು ಬೆಳೆಯುವುದರಿಂದಲೇ ಕೆಲವರು ಬದಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ರೈತರು ಸೇವಂತಿ, ಗುಲಾಬಿ, ಚೆಂಡೂವುವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಅದರಲ್ಲೂ ಶ್ರಾವಣ ಮಾಸ, ದಸರಾ ಮತ್ತು ಕಾರ್ತಿಕ ಮಾಸಕ್ಕೆ ಹೂವಿನ ಬೇಡಿಕೆ ಹೆಚ್ಚಿರುವ ಕಾರಣ ನಿಗಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಂತಿ ಮತ್ತು ಚೆಂಡು ಹೂವುಗಳನ್ನು ಬೆಳೆಯುತ್ತಾರೆ.

ಈ ಬಾರಿ ಸಾಲು ಸಾಲು ಹಬ್ಬಗಳ ದೃಷ್ಟಿಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ನಾನಾ ಬಗೆಯ ಹೂವುಗಳನ್ನು ಬೆಳೆದಿದ್ದಾರೆ. ವರಮಹಾಲಕ್ಷಿö್ಮ, ಗಣಪತಿ ಹಬ್ಬದ ಸಂದರ್ಭದಲ್ಲಿ ಹೂವಿಗೆ ಸ್ವಲ್ಪ ಬೇಡಿಕೆ ಮತ್ತು ಬೆಲೆ ಏರಿಕೆ ಕಂಡಿತ್ತು. ಈ ಮೂಲಕ ರೈತ ಹಾಕಿದ ಬಂಡವಾಳದ ಜೊತೆಗೆ ಆದಾಯ ಗಳಿಸಿದರು.

ಆದರೆ ಈಗ ಶ್ರಾವಣ ಮುಗಿದ ನಂತರ ಹೂವಿನ ಬೆಲೆ ಗಣನೀಯವಾಗಿ ಇಳಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಸೇವಂತಿ ಪ್ರತಿ ಕೆಜಿಗೆ ೧೦ ರಿಂದ ೨೦ ರೂ, ಚೆಂಡೂವು ಕೆಜಿ ೧೦ ರೂಗಳಿಗೆ ಮಾರಾಟವಾಗುತ್ತಿದೆ. ಇದರಿಂದ ಹಾಕಿದ ಬಂಡವಾಳವೂ ರೈತರ ಕೈಸೆರುತ್ತಿಲ್ಲ. ಹೂ ಕೀಳಲು ಕೆಲಸಗಾರರಿಗೆ ನೀಡಿದ ಕೂಲಿ ಹಣವನ್ನೂ ಸಹ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಕೆಜಿ ಸೇವಂತಿ ಹೂ ಕೀಳಬೇಕಾದರೆ ಕೆಲಸಗಾರರಿಗೆ ೧೦ ರೂಗಳನ್ನು ನೀಡಬೇಕಾಗಿದೆ.

ಜಿಲ್ಲೆಯ ರೈತರು ಸಾಮಾನ್ಯವಾಗಿ ಬೆಂಗಳೂರು, ಕೋಲಾರ ಮತ್ತು ಆಂಧ್ರದ ವಿಕೋಟ ಮಾರುಕಟ್ಟೆಗೆ ಹೂಗಳನ್ನು ಮಾರಾಟಕ್ಕೆ ಕಳುಹಿಸುತ್ತಿದ್ದು, ಸಧ್ಯ ೩೦ ಕೆಜಿ ತೂಕದ ಸೇವಂತಿ ಮೂಟೆಗಳು ೨೦೦ ರೂಗಳಿಂದ ೪೦೦ ರೂಗಳಿಗೆ ಮಾರಾಟವಾಗುತ್ತಿದೆ. ಚೆಂಡೂವುಗಳನ್ನು ಕೇಳುವವರೇ ಇಲ್ಲದ ಕಾರಣ ಮಾರುಕಟ್ಟೆಗೆ ಹಾಕಿದ ಹೂಗಳು ಮಾರಾಟವಾಗದೆ ರೈತರು ಹೂಗಳನ್ನು ತಂದು ರಸ್ತೆ ಬದಿ ಸುರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೇವಂತಿ ಮಾರುಕಟ್ಟೆಯಲ್ಲಿ ಮಾರಾಟವಾದರೂ ಸಹ ಕೂಲಿ ಹಣ ಬರದೇ ನಷ್ಟಕ್ಕೆ ಒಳಗಾಗುವ ಕಾರಣದಿಂದ ರೈತರು ಹೂವನ್ನು ಕೀಳದೇ ತೋಟದಲ್ಲಿಯೇ ಬಿಟ್ಟಿದ್ದಾರೆ. ಇದರಿಂದ ರೈತರಿಗೆ ಲಕ್ಷಾಂತರ ರೂಗಳು ನಷ್ಟ ಉಂಟಾಗುತ್ತಿದ್ದು, ಬೆಳೆಗೆ ಮಾಡಿದ ಸಾಲ ತೀರಿಸೋದು ಹೇಗೆ ಎಂದು ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.

ಈಗಾಗಲೇ ಕೆಲವು ತೋಟಗಳಲ್ಲಿ ಹೂವು ಮುಗಿದಿದೆ. ಕೆಲವರು ಹೂವನ್ನು ಕೀಳದೆ ಬಿಟ್ಟಿರುವುದರಿಂದ ಗಿಡಗಳು ಹಾಳಾಗುವ ಪರಿಸ್ಥಿತಿ ಬಂದಿದೆ. ಪಿತೃಪಕ್ಷ ಮುಗಿದ ನಂತರ ದಸರಾ ಪ್ರಾರಂಭವಾಗಲಿದೆ. ನಂತರ ಕಾರ್ತಿಕ ಪ್ರಾರಂಭವಾಗುತ್ತದೆ. ಕನಿಷ್ಟ ೨ ತಿಂಗಳ ಕಾಲ ಉತ್ತಮ ಬೆಲೆ ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಆದರೆ ಹೂವು ಈಗ ಕೀಳದೆ ಗಿಡಗಳಲ್ಲಿಯೇ ಬಿಟ್ಟಿರುವುದರಿಂದ ಮುಂದೆ ಗಿಡಗಳಲ್ಲಿ ಹೂವು ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ರೈತರನ್ನು ಕಾಡುತ್ತಿದೆ.

ಟಮೆಟೋ ಬೆಲೆಯು ಕುಸಿತ :

ಕಳೆದ ಒಂದು ತಿಂಗಳಿAದ ಟಮೆಟೋ ಬೆಳೆಯು ದಿಢೀರನೆ ಕುಸಿದಿದೆ. ಮಳೆ ಕಾರಣ ಕೋಸು, ಕ್ಯಾಪ್ಸಿಕಂ ಬೆಲೆಯು ಕುಸಿದಿದ್ದು, ಟಮೆಟೋ ಮತ್ತು ಹೂವಿನ ಬೆಲೆಯು ಕುಸಿದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಟಮೆಟೋಗೆ ವೈರಸ್ ಮತ್ತು ಬೆಂಕಿ ರೋಗ ಕಾಡುತ್ತಿರುವುದರಿಂದ ಗುಣಮಟ್ಟದ ಟಮೆಟೋ ಮಾರುಕಟ್ಟೆಗೆ ಬರುತ್ತಿಲ್ಲ. ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಗುಣಮಟ್ಟ ಇಲ್ಲದ ಕಾರಣ ಬೆಲೆ ಇಲ್ಲ ಎಂದು ಹೇಳುತ್ತಿದ್ದಾರೆ.

ಕೋಟ್ :

ಹೂವಿನ ಬೆಲೆ ಕುಸಿದಿರುವ ಕಾರಣ ತೋಟಗಳಲ್ಲಿಯೇ ಹೂವು ಕೊಳೆಯುವಂತೆ ಅಗಿದೆ. ಹೂವನ್ನು ಬಿಡಿಸಿ ಮಾರುಕಟ್ಟೆಗೆ ಕೊಂಡೊಯ್ಯುವ ಕೂಲಿ ಬರದಂತೆ ಆಗಿದೆ. ತೋಟಗಳಲ್ಲಿಯೇ ಹೂವು ಬಿಟ್ಟಿರುವುದರಿಂದ ಕೊಳೆತು ಗಿಡಗಳು ಹಾಳಾಗುತ್ತಿವೆ. ದಸರಾ ಮತ್ತು ಕಾರ್ತಿಕ ಮಾಸಕ್ಕೆ ಹೂವಿಗೆ ಬೆಲೆ ಬರಬಹುದು ಎಂಬ ನಿರೀಕ್ಷೆ ಇದೆ. ಆದರೆ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಗಿಡಗಳು ನಾಶವಾಗುತ್ತಿವೆ. ಫಸಲು ಇಲ್ಲದ ಸಂದರ್ಭದಲ್ಲಿ ಬೆಲೆ ಏರಿಕೆ ಆಗುತ್ತದೆ. ಬೆಲೆ ಕುಸಿದಿರುವ ಸಂದರ್ಭದಲ್ಲಿ ಹೂವನ್ನು ಶೀಥಲ ಗೃಹಳಲ್ಲಿ ಇಡಬಹುದು. ಸರ್ಕಾರ ಆ ವ್ಯವಸ್ಥೆಯನ್ನು ಮಾಡಿಲ್ಲ. ಖಾಸಗಿ ಶೀಥಲ ಗೃಹಗಳು ಇಲ್ಲ. ರೈತನ ಕಷ್ಟ ಕೇಳುವವರೇ ಇಲ್ಲದಂತೆ ಆಗಿದೆ.

-ಶ್ರೀರಾಮರೆಡ್ಡಿ, ರೈತ

ಚಿತ್ರ ೧೬ ಕೆ.ಎಲ್.ಆರ್. ೦೧ : ತೋಟಗಳಲ್ಲಿ ಹೂವನ್ನು ಬಿಡಿಸದೆ ಇರುವುದು.

ಚಿತ್ರ ೧೬ ಕೆ.ಎಲ್.ಆರ್. ೦೧ಎ : ಚೆಂಡು ಹೂವು ಬೆಲೆ ಇಲ್ಲದ ಕಾರಣ ರಸ್ತೆಗೆ ಸುರಿದಿರುವುದು.

ಚಿತ್ರ ೧೬ ಕೆ.ಎಲ್.ಆರ್. ೦೧ಬಿ : ಶ್ರೀರಾಮರೆಡ್ಡಿ, ರೈತ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net