

ನಗರದ ಮೂರು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಶನಿವಾರ ಹುಸಿ ಬಾಂಬ್ ಬೆದರಿಕೆ ಸಂದೇಶ ಬರುವುದರೊಂದಿಗೆ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಲಕಾಲ ಆತಂಕಗೊಂಡಿದ್ದರು.
ಜಯಲಕ್ಷ್ಮಿಪುರಂನ ವಿದ್ಯಾಶ್ರಮ, ಮೇಟಗಳ್ಳಿಯ ಫ್ಯೂಚರ್ ಫೌಂಡೇಶನ್ ಕಾಲೇಜು ಹಾಗೂ ಮೈಕಾ ಶಾಲೆಗೆ ಏಕ ಕಾಲದಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಫ್ಯೂಚರ್ ಫೌಂಡೇಶನ್ ಹಾಗೂ ಮೈಕಾ ಸಂಸ್ಥೆಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಬಂದಿದೆ ವಿದ್ಯಾಶ್ರಮಕ್ಕೆ ಫೋನ್ ಮೂಲಕ ಕರೆ ಬಂದಿದೆ ಎನ್ನಲಾಗಿದೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೂಲಂಕುಷ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರೀಯ ದಳ, ಬಾಂಬ್ ತಪಾಸಣೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶಾಲಾ ಆವರಣದಲ್ಲಿ ತಪಾಸಣೆ ನಡೆಸಿದ್ದು, ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆಲವು ಶಾಲೆಗಳಿಗೆ ಇದೇ ರೀತಿ ಕರೆ ಬಂದಿದ್ದು ಆತಂಕ ಸೃಷ್ಟಿಸಿತ್ತು. ಇದೀಗ ಮೈಸೂರಿನ ಶಾಲೆಗಳಿಗೂ ಇಂತಹ ಬೆದರಿಕೆಗಳು ಬಂದಿರುವುದು ಆತಂಕದ ವಿಚಾರವಾಗಿದೆ. ಇಂತಹ ಆತಂಕ ಸೃಷ್ಟಿಸುವ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಒತ್ತಾಯಿಸಿದ್ದಾರೆ.