ಹಿಂದುಗಳ ಭೂಮಿ ಆಕ್ರಮಣದ ಹುನ್ನಾರ

11 nrp 1 A shoba yatre
ಎನ್.ಆರ್.ಪುರದಲ್ಲಿ ನಡೆದ ವಿಶ್ವ ಹಿಂದು ಪರಿಷತ್ ಶೋಭಾಯಾತ್ರೆಯಲ್ಲಿ ಶ್ರೀರಾಮ, ಆಂಜನೇಯ ವಿಗ್ರಹದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು.
Published on

ಎನ್.ಆರ್.ಪುರ: ವಕ್ಫ್ ಬೋರ್ಡ್‌ನಿಂದ ಲ್ಯಾಂಡ್ ಜಿಹಾದ್ ಮೂಲಕ ಹಿಂದುಗಳ ಭೂಮಿ ಆಕ್ರಮಣದ ಹುನ್ನಾರ ನಡೆಯುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.

ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದ ಶ್ರೀ ಗುರುದತ್ತ ವೇದಿಕೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಆಯೋಜಿಸಿದ್ದ ಹಿಂದು ಸಮ್ಮಿಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಹಿಂದುಗಳ ಧಾರ್ಮಿಕ ಕ್ಷೇತ್ರ, ಕಾರ್ಯಗಳಾಗುವ ಜಾಗವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. 9.40 ಲಕ್ಷ ಎಕರೆ ವಕ್ಫ್ ಬೋರ್ಡ್‌ನ ವಶದಲ್ಲಿದೆ. ಇಷ್ಟು ಭೂಮಿ ನಮ್ಮ ಹಿಂದು ದೇವಾಲಯಗಳಲ್ಲೂ ಇಲ್ಲ. ಹಿಂದುಗಳೆಲ್ಲರೂ ಒಟ್ಟಾದರೆ ಮಾತ್ರ ದೇಶ ಸದೃಢವಾಗುತ್ತದೆ. ನಮ್ಮ ಧರ್ಮ ರಕ್ಷಣೆಯಾಗುತ್ತದೆ. ಧರ್ಮ ರಕ್ಷಣೆ, ಸಂಸ್ಕಾರದ ಉಳಿವು ನಮ್ಮೆಲ್ಲರ ಕೈಯಲ್ಲಿದೆ ಎಂದರು.

ಭಾರತದಲ್ಲಿ ನಾವು ಹಿಂದುಗಳಾಗಿ ಹುಟ್ಟಿರುವುದೇ ಪುಣ್ಯ. ದೇಶದಲ್ಲಿ ಹಿಂದುಗಳಿಗೆ ಅಪಮಾನ, ಸ್ವಾಮೀಜಿಗಳಿಗೆ ಅವಮಾನ ಮಾಡುವ ದುರುದ್ದೇಶ ನಡೆಯುತ್ತಿದೆ. ನಾವು ಮುಸ್ಲಿಂ, ಕ್ರಿಶ್ಚಿಯನ್ನರ ವಿರೋಧಿಗಳಲ್ಲ ಎಂದು ಹೇಳಿದರು.

ವಿಶ್ವ ಹಿಂದು ಪರಿಷತ್ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, ಇಂದು ಮಾನವ ಹಕ್ಕುಗಳ ದಿನ. ಆದರೆ ಹಿಂದುಗಳ ಹಕ್ಕುಗಳನ್ನೇ ಕಿತ್ತುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ನಾವು ಇಂದು ಕೇವಲ ಶೋಭಾಯಾತ್ರೆ ಮಾಡಿಲ್ಲ. ಹಿಂದುಗಳು ಇದ್ದೇವೆ ಎಂದು ಶೋಭಾಯಾತ್ರೆ ಮಾಡಲಾಗಿದೆ ಎಂದರು. ದತ್ತಮಾಲಾ ಅಭಿಯಾನ ಹಾಗೂ ದತ್ತ ಜಯಂತಿ ಅಂಗವಾಗಿ ಬೆಳಗ್ಗೆ ಬಸ್ತಿಮಠದ ಮಹಾವೀರ ಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ ಜರುಗಿತು. ಸಂಜೆ ಬಿ.ಎಚ್.ಕೈಮರದಿಂದ ಪ್ರವಾಸಿ ಮಂದಿರದವರೆಗೆ, ಮೇದರಬೀದಿ, ಪೌರಕಾರ್ಮಿಕರ ಕಾಲನಿ ಮಾರ್ಗವಾಗಿ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದವರೆಗೆ ಬೃಹತ್ ಶೋಭಾಯಾತ್ರೆ, ವಾಹನಗಳ ಜಾಥಾ ನಡೆಯಿತು. ಶೋಭಾಯಾತ್ರೆಯಲ್ಲಿ ಶ್ರೀರಾಮ, ಆಂಜನೇಯನ ಸ್ತಬ್ಧಚಿತ್ರ ನೋಡುಗರ ಗಮನಸೆಳೆಯಿತು.

ಮಾಜಿ ಸಚಿವ ಡಿ.ಎನ್.ಜೀವರಾಜ್, ವಿಶ್ವ ಹಿಂದು ಪರಿಷತ್ ಶೃಂಗೇರಿ ಜಿಲ್ಲಾ ಉಪಾಧ್ಯಕ್ಷ ಗಿರೀಶ್, ತಾಲೂಕು ಅಧ್ಯಕ್ಷ ಕೋಣಿಕೆರೆ ಸತ್ಯನಾರಾಯಣ, ಮುಖಂಡರಾದ ಅರುಣ್ ಜೈನ್, ಧನಂಜಯ, ಅನೂಪ್ ಹಂಚಿನಮನೆ, ಅಜಿತ್, ಅಭಿಷೇಕ್, ಅವಿನಾಶ್ ಮೂಡಬಾಗಿಲು, ಮದನ್ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net