ಹಿಂದು ಸಮಾಜ ಎಚ್ಚೆತ್ತುಕೊಳ್ಳಲಿ

27kpp1 hindu
ಉಗ್ರ ದಾಳಿ, ಜನಿವಾರ ಘಟನೆ ವಿರೋಧಿಸಿ ಶೃಂಗೇರಿ ಕ್ಷೇತ್ರದ ವಿಶ್ವಕರ್ಮ ಸೇವಾ ಸಮಾಜದಿಂದ ಕೊಪ್ಪದ ಹುಲ್ಲುಮಕ್ಕಿಯಲ್ಲಿ ಖಂಡನಾ ಸಭೆ ನಡೆಯಿತು. ಎ.ಎಸ್.ಕೃಷ್ಣಯ್ಯ ಆಚಾರ್, ನವೀನ್ ಆಚಾರ್ಯ ಇದ್ದರು.
Published on

ಕೊಪ್ಪ: ಪಹಲ್ಗಾಮ್‌ನಲ್ಲಿ ಉಗ್ರರು ಹಿಂದುಗಳನ್ನು ಗುರುತಿಸಿ ಹತ್ಯೆ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಹಿಂದು ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಶೃಂಗೇರಿ ಕ್ಷೇತ್ರದ ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಆಚಾರ್ ತಿಳಿಸಿದರು.

ಉಗ್ರರ ದಾಳಿ, ಸಿಇಟಿಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಹಾಗೂ ಜಾತಿ ಜನಗಣತಿ ವಿರೋಧಿಸಿ ಭಾನುವಾರ ಹುಲ್ಲುಮಕ್ಕಿಯಲ್ಲಿ ಶೃಂಗೇರಿ ಕ್ಷೇತ್ರದ ವಿಶ್ವಕರ್ಮ ಸೇವಾ ಸಮಾಜ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಮಾತನಾಡಿದರು.

ಪಹಲ್ಗಾಮ್‌ನ ಘಟನೆಯಿಂದ ಹಿಂದು ಸಮಾಜಕ್ಕೆ ಆಘಾತವಾಗಿದೆ. ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೇಶದಲ್ಲಿ ಶಾಂತಿಯಿಂದ ನೆಲೆಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.

ನಾವು ಗಾಯತ್ರಿ ಮಂತ್ರದ ಆರಾಧಕರು. ಪರೀಕ್ಷೆ ಬರೆಯಲು ತೆರಳಿದ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

2011ರಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನಸಂಖ್ಯೆ ಸುಮಾರು 40 ಲಕ್ಷ ಎಂದು ತಿಳಿಸಿತ್ತು. ಆದರೆ ಈ ಜಾತಿಗಣತಿಯಲ್ಲಿ 15 ಲಕ್ಷ ಇದೆ ಎಂದು ವರದಿ ನೀಡಿದೆ. ಏಕಾಏಕಿ ನಮ್ಮ ಸಮಾಜದ ಸಂಖ್ಯೆ ಕಡಿಮೆಯಾಗಿದ್ದು ಹೇಗೆ? ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದೆ ಎಂದರು.

ವಿಶ್ವಕರ್ಮ ಸೇವಾ ಸಮಾಜದ ಕಾರ್ಯದರ್ಶಿ ನವೀನ್, ಪಪಂ ಮಾಜಿ ಅಧ್ಯಕ್ಷ ಕಿಶೋರ್ ಪೇಜಾವರ್, ಪ್ರಮುಖರಾದ ಮಹೇಶ್ ಆಚಾರ್, ವೆಂಕಪ್ಪಾಚಾರ್, ಉಮೇಶ್ ಆಚಾರ್, ನಾಗಭೂಷಣ್, ಕೆ.ಆರ್ ಭಾಸ್ಕರ್ ಶಿವಮೊಗ್ಗ, ಯೋಗೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net