ಹಿಂದು- ಮುಸ್ಲಿಮರು ಒಂದಾಗಿ ಬದುಕಲಿ

10.ಪಿ ವೈ ಪಿ.02
ಪಿರಿಯಾಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೆ.ಮಹದೇವ್, ಶಾಫಿ ಉಸ್ತಾದ್, ಪಿ.ಎಂ. ಪ್ರಸನ್ನ ಮತ್ತಿತರರು ಭಾಗವಹಿಸಿದ್ದರು.
Published on

ಪಿರಿಯಾಪಟ್ಟಣ: ಹಿಂದು- ಮುಸ್ಲಿಮರು ಒಂದು ತಾಯಿ ಮಕ್ಕಳಂತೆ ಬದುಕಬೇಕು. ಅದನ್ನು ನಾನು ಕಣ್ಣಾರೆ ನೋಡಬೇಕು ಎಂಬುದು ನನ್ನ ಅಭಿಲಾಷೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.


ಜಿಶ್ನೆ ಈದ್ ಮಿಲಾದ್ ಉನ್ ನಬೀ ಮತ್ತು ಜಿಶ್ನೆ ಗೌಸ್‌ಉಲ್ ವತಿಯಿಂದ ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಈದ್ ಮಿಲಾದ್ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆ ನಂತರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಶತಸಿದ್ಧ. ಮುಸ್ಲಿಂ ಸಮಾಜದ ರಕ್ಷಣೆಗೆ ನಾನು ಬದ್ಧ ಎಂದು ಭರವಸೆ ನೀಡಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಛೇದಿನ್ ಆಯೇಗಾ ಎಂಬ ಘೋಷಣೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಆದರೆ ಅಂಬಾನಿ, ಅದಾನಿಗೆ ಮಾತ್ರ ಅಚ್ಛೇ ದಿನ್ ಬಂದಿದೆ. ನಮಗೆ ಈ ಹಿಂದೆ ಇದ್ದ ದಿನಗಳನ್ನೇ ಹಿಂತಿರುಗಿಸಿ ಕೊಡಿ. 1972ರಿಂದ ಪಿರಿಯಾಪಟ್ಟಣಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬರುತ್ತಿದ್ದೇನೆ. ಎಚ್.ಎಂ.ಚನ್ನಬಸಪ್ಪ, ಕಾಳಮರೀಗೌಡ, ಕೆ.ವೆಂಕಟೇಶ್ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿದ್ದೇನೆ. ಶಾಸಕ ಕೆ.ಮಹದೇವ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.


ತಾಲೂಕಿನಲ್ಲಿ ಈದ್ ಮಿಲಾದ್ ಆಚರಣೆ ಕುರಿತಂತೆ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿದ್ದು, ಶಾಂತಿಯುತವಾಗಿ ಈದ್‌ಮಿಲಾದ್ ಆಚರಣೆ ಮಾಡುವಂತೆ ಮನವೊಲಿಸಲಾಗಿದೆ. ಮುಸ್ಲಿಂ ಸಮಾಜವನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತೆ ಶಾಸಕ ಕೆ.ಮಹದೇವ್ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.


ಶನಿವಾರಸಂತೆ ಮಸೀದಿಯ ಧರ್ಮಗುರು ಶಾಫಿ ಸಯ್ಯದಿ ಉಸ್ತಾದ್ ಮಾತನಾಡಿ, 1497 ವರ್ಷಗಳ ಹಿಂದೆ ಮೆಕ್ಕಾದಲ್ಲಿ ಜನಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ್ದಾರೆ. ಯಾವುದೇ ಧಾರ್ಮಿಕ ಆಚರಣೆಗಳು ಇತರರನ್ನು ನೋಯಿಸಬಾರದು. ಮಾನವೀಯ ಸಂಬಂಧಗಳನ್ನು ಜೋಡಿಸುವಂತಹ ಆಚರಣೆ ಆಗಬೇಕು ಎಂಬುದು ಪೈಗಂಬರ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಇಸ್ಲಾಂ ಧರ್ಮವು ಎಂದಿಗೂ ಯುದ್ಧ ಅಥವಾ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ. ಯಾವ ಧರ್ಮವೂ ಇನ್ನೊಬ್ಬರನ್ನು ದ್ವೇಷಿಸು ಎಂದು ಹೇಳಿಲ್ಲ. ಇಸ್ಲಾಂ ಧರ್ಮದ ಮೂಲ ತತ್ವವು ಅಲ್ಲಾನೊಂದಿಗೆ ವಿಶ್ವಾಸದಿಂದಿರು ಎಂಬುದಾಗಿದೆ. ವಿಶ್ವದಾದ್ಯಂತ ಇಸ್ಲಾಂ ಧರ್ಮದ ಬಗ್ಗೆ ತಪ್ಪು ಭಾವನೆ ಮೂಡಿಸುವ ಕೆಲಸ ನಡೆಯುತ್ತಿರುವುದು ಬೇಸರ ತರಿಸಿದೆ. ಶಾಂತಿಯ ವಕ್ತಾರ ಮುಹಮ್ಮದ್ ಪೈಗಂಬರರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.


ಶಾಸಕ ಕೆ.ಮಹದೇವ್, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿಉಸ್ತಾದ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಕೆ.ಮಹೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ.ಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಎ.ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ತಾಪಂ ಮಾಜಿ ಸದಸ್ಯರಾದ ಅತ್ತಹರ್ ಮತೀನ್, ಟಿ.ಈರಯ್ಯ, ಎಸ್.ರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net