

ಹನಗೋಡು: ಇಲ್ಲಿನ ಹೊಸವಾರಂಚಿ ಗ್ರಾಮದಲ್ಲಿ ಹಾಡಹಗಲೇ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.
ಗ್ರಾಮದ ರವಿ ಎಂಬವರ ಪತ್ನಿ ಕವಿತಾ ಮಂಗಳವಾರ ಮಧ್ಯಾಹ್ನ ಮನೆ ಮುಂದಿನ ಜಮೀನಿಗೆ ತೆರಳಲು ಹೊರಗೆ ಬಂದ ವೇಳೆ ಚಿರತೆ ಕಾಣಿಸಿದ್ದು, ಗಾಬರಿಯಿಂದ ಕೂಗಿಕೊಂಡು ಓಡಿ ಹೋಗಿದ್ದಾರೆ. ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದರಾದರೂ ಚಿರತೆ ನಾಪತ್ತೆಯಾಗಿತ್ತು. ಮತ್ತೆ ರಾತ್ರಿ ಮನೆಯವರು ಮಗುವಿನ ಜತೆ ಹೊರಗೆ ಬಂದಾಗ ತೆಂಗಿನ ಮರದ ಬಳಿ ಮತ್ತೆ ಚಿರತೆ ಕಂಡು ಮನೆಯೊಳಗೆ ಓಡಿಹೋಗಿದ್ದಾರೆ. ಬಳಿಕ ಮೊಬೈಲ್ ಮೂಲಕ ಚಿರತೆ ಚಿತ್ರ ಸೆರೆ ಹಿಡಿದಿದ್ದಾರೆ. ಇದೀಗ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಓಡಾಡಲು ಜನ ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆೆ ಮಾಹಿತಿ ನೀಡಿದ್ದು, ಚಿರತೆ ಸರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೆರೆ ಹಿಡಿಯಲು ಕ್ರಮ: ಈಗಾಗಲೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿರುವುದರಿಂದ ಚಿರತೆ ಸೆರೆ ಹಿಡಿಯಲು ಬೋನು ಇರಿಸಲಾಗುವುದು. ಜನರು ಎಚ್ಚರಿಕೆಯಿಂದ ಓಡಾಡಬೇಕೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ನಂದಕುಮಾರ್ ಮನವಿ ಮಾಡಿದ್ದಾರೆ.