

ವಿಜಯವಾಣಿ ಸುದ್ದಿಜಾಲ ಹಳಿಯಾಳ ಕಬ್ಬಿನ ಬೆಲೆ ನಿಗದಿ ಸಂಬಂಧ ಹಳಿಯಾಳದಲ್ಲಿ ಸತತ ನಾಲ್ಕನೇ ದಿನ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಆಡಳಿತ ಸೌಧದ ಎದುರು ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಶಿರಸಿ ಎಸಿ ದೇವರಾಜ ಆರ್. ಅವರು ನಡೆಸಿದ ಸಂಧಾನ ಸಭೆಯೂ ವಿಫಲವಾಗಿದೆ.
ಹಿರಿಯ ರೈತ ಹೋರಾಟಗಾರ ಉಡಚಪ್ಪಾ ಬೋಬಾಟಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಇಲ್ಲಿನ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಯೋಗ್ಯ ಬೆಲೆ ನೀಡುವುದರಲ್ಲಿ ಪ್ರತಿವರ್ಷ ಮೀನಮೇಷ ಎಣಿಸುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ನ್ಯಾಯಯುತ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದು ರೈತರು ನಡೆಸುತ್ತಿರುವ ಹೋರಾಟ ನ್ಯಾಯ ಸಿಗುವವರೆಗೆ ನಿಲ್ಲಬಾರದು ಎಂದರು.
ಎಸ್.ಕೆ.ಗೌಡ ಮಾತನಾಡಿ ತಾಲೂಕಿನ ರೈತರ ಪರಿಸ್ಥಿತಿ ಹದಗೆಡಲು ಸ್ಥಳೀಯ ಶಾಸಕ ಆರ್. ವಿ. ದೇಶಪಾಂಡೆ ಅವರೇ ಕಾರಣ. ಈ ಹಿಂದೆ ಸಕ್ಕರೆ ಕರ್ಖಾನೆ ಎದುರು ಒಂದು ತಿಂಗಳು ಹೋರಾಟ ನಡೆಸಿದ ಸಂದರ್ಭದಲ್ಲೂ ಸೌಜನ್ಯಕ್ಕೂ ಭೆಟಿ ಕೊಟ್ಟು ರೈತರ ನೋವು ಆಲಿಸಿಲ್ಲ. ಇಂದಿನ ಹೋರಾಟಕ್ಕೂ ಅವರು ಭೇಟಿ ನೀಡಿಲ್ಲ. ಹೀಗಾಗಿ ಅವರು ಹಾಗೂ ಮಾಜಿ ಶಾಸಕರಾದ ಸುನೀಲ್ ಹೆಗಡೆ ಮತ್ತು ಎಸ್.ಎಲ್. ಘೊಟ್ನೆಕರ ಅವರ ಪಕ್ಷಗಳ ಕಾರ್ಯಕರ್ತ ರೈತರು ತಮ್ಮ ನಾಯಕರನ್ನು ಪ್ರಶ್ನೀಸಬೇಕಿದೆ. ಇವರಿಂದ ರೈತರು ಏನು ಉದ್ದಾರವಾಗಲು ಸಾಧ್ಯವೆಂದು ಕಿಡಿಕಾರಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಮಾತನಾಡಿ ರೈತರ ನ್ಯಾಯಯುತ ಬೇಡಿಕೆ ಈಡೇರಿಸದ ಪ್ಯಾರಿ ಕಾರ್ಖಾನೆಯವರು ರೈತರಲ್ಲಿ ಒಡಕು ಮೂಡಿಸುವ, ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ದ ಗುಡುಗಿದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನಾ ಸ್ಥಳದಿಂದ ಒಂದು ಇಂಚು ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎನ್.ಎಸ್. ಜಿವೋಜಿ ಮಾತನಾಡಿ ಕಾರ್ಖಾನೆಯು ರೈತರೊಂದಿಗೆ ದ್ವೀಪಕ್ಷೀಯ ಒಪ್ಪಂದ ಮಾಡಿಕೊಂಡು, ಯೋಗ್ಯ ದರ ನೀಡುವವರೆಗೂ ಹಾಗೂ ಹಳೆಯ ಬಾಕಿ ನೀಡುವವರೆಗೂ ಕಾರ್ಖಾನೆ ಆರಂಭಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶಂಕರ ಕಾಜಗಾರ, ಅಶೋಕ ಮೇಟಿ, ಸುರೇಶ ಶಿವಣ್ಣವರ, ಎಂ.
ವಿ ಘಾಡಿ, ಮಂಜುಳಾ ಗೌಡಾ ಮಾತನಾಡಿ ಜೈಲಿಗೆ ಕಳಿಸಿದರು ಹೋರಾಟ ನಿಲ್ಲದು ಎಂದರು.
ಎಸಿ ಭೇಟಿ :ಆಡಳಿತ ಸೌಧದ ಎದುರು ನಡೆಯುತ್ತಿದ್ದ ಪ್ರತಿಭಟನೆಗೆ ಭೇಟಿ ನೀಡಿದ ಶಿರಸಿ ಎಸಿ ದೇವರಾಜ ಆರ್. ಅವರು ರೈತರ ಮನವೊಲಿಸಿ, ಪ್ರತಿಭಟನೆ ಹಿಂದಕ್ಕೆ ಪಡೆಯಲು ಮನವಿ ಮಾಡುತ್ತಿರುವಾಗಲೇ ರೈತರು ಕೆರಳಿದರು. ಅಲ್ಲದೇ ಎಸಿ ಅವರ ವಿರುದ್ದವೇ ಧಿಕ್ಕಾರ ಕೂಗಿ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಬಲ: ಜಯ ಕರ್ನಾಟಕ ಸಂಘಟನೆ, ಕರ್ನಾಟಕ ನವನಿರ್ಮಾಣ ಸೇನೆ, ಹಳಿಯಾಳ ನ್ಯಾಯವಾದಿಗಳ ಸಂಘ, ಹಿರಿಯ ನಾಗರಿಕರ ವೇದಿಕೆ, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಫೋನಿನ ಮಾತುಕತೆಯೂ ವಿಫಲ
ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಸೌಧದ ಒಳಗೆ ರೈತ ಮುಖಂಡರು, ಎಸಿ ದೇವರಾಜ ಆರ್ ಅವರು ಪ್ಯಾರಿ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಯವರಿಗೆ ಫೊನಾಯಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಹಲವು ಸುತ್ತಿನ ಮಾತುಕತೆ ನಡೆಯಿತು. ಆದರೇ ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆಯ ಮಧ್ಯೆ ಮಾತುಕತೆ ಫಲಪ್ರದವಾಗದೆ. ರೈತರೊಂದಿಗೆ ಒಮ್ಮತ ಮೂಡದ ಕಾರಣ ಕಬ್ಬು ಬೆಳೆಗಾರ ರೈತರು ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ಹೋರಾಟ ಮುಂದುವರೆಯಲಿದೆ, ಶನಿವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಲಿದ್ದಾರೆಂದು ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಸಾಯಂಕಾಲ ಘೋಷಿಸಿದರು.