

ತರೀಕೆರೆ: ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬದಲಾಗುವ ಪ್ರಕ್ರಿಯೆಯೇ ಹದಿಯರೆಯ ಎಂದು ಮಕ್ಕಳ ತಜ್ಞ ಡಾ. ಎಸ್.ಗಿರೀಶ್ ಹೇಳಿದರು. ಪಟ್ಟಣದ ಅರುಣೋದಯ ಶಾಲೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಆಶೀರ್ವಾದ ಆಸ್ಪತ್ರೆ ಸಹಯೋಗದಲ್ಲಿ ಹೆಣ್ಣು ಮಕ್ಕಳಿಗೆ ಹದಿಹರೆಯದ ಸಮಸ್ಯೆಗಳು ಮತ್ತು ಆರೋಗ್ಯ, ಋತುಚಕ್ರ ಶುಚಿತ್ವ ನಿರ್ವಹಣೆ ಮತ್ತು ಸ್ವಚ್ಛತೆ ಕುರಿತಾಗಿ ಅರಿವು ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹದಿಹರೆಯದವರಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಾದ ಮಾನಸಿಕ ಆರೋಗ್ಯ, ಮಾದಕ ವಸ್ತುಗಳ ಬಳಕೆ, ಹಿಂಸಾತ್ಮಕ ನಡವಳಿಕೆ ಗಮನಾರ್ಹವಾದ ಅಂಶಗಳು. ಮಕ್ಕಳ ಜೀವಶೈಲಿ, ಪೌಷ್ಟಿಕಾಂಶ, ಮಕ್ಕಳಲ್ಲಿ ಲೈಂಗಿಕ ಕಿರುಕುಳವಾದಾಗ ಸಂಪರ್ಕಿಸುವ ವಿಧಾನ, ಅಂಡಾಣು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಲಸಿಕೆ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯ ಬಿ.ವಿ.ಕಿಶೋರ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿಕುಮಾರ್, ಕಾರ್ಯದರ್ಶಿ ಪ್ರವೀಣ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮೀರಾ, ಅರುಣೋದಯ ವಿದ್ಯಾಸಂಸ್ಥೆ ಸಂಯೋಜಕಿ ಗೀತಾ, ಮುಖ್ಯ ಶಿಕ್ಷಕಿ ಗೌರಮ್ಮ, ಪ್ರವೀಣ್ ನಾಹರ್, ಮಂಜುಳಾ, ಚೈತ್ರಾ ಮತ್ತಿತರರಿದ್ದರು.