

ಬೆಂಗಳೂರು: ಹೋಟೆಲ್‌ವೊಂದಕ್ಕೆ ನುಗ್ಗಿರುವ ಮೂವರು ದುಷ್ಕರ್ಮಿಗಳು, ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿದ್ದಾರೆ.
ಕಮ್ಮನಹಳ್ಳಿಯಲ್ಲಿ ಭಾನುವಾರ ರಾತ್ರಿ ೧೧.೩೦ಕ್ಕೆ ಈ ಘಟನೆ ನಡೆದಿದೆ. ವಿಶಾಲ್ ಜಾ ಎಂಬುವವರು ಘಟನೆ ಸಂಬಂಧ ಸಿಸಿ ಕ್ಯಾಮರಾ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮೂವರು ಪುಂಡರ ಹೋಟೆಲ್‌ನ ರಿಸೆಪ್ಷನ್‌ಗೆ ಬಂದು ಮಾಲೀಕನ ಜತೆಗೆ ಕೆಲ ಕಾಲ ಮಾತಿನಚಕಮಕಿ ನಡೆಸಿದ್ದಾರೆ. ಈ ವೇಳೆ ಮೂವರ ಪೈಕಿ ಓರ್ವ ತನ್ನ ಪ್ಯಾಂಟ್ ಜೇಬಿನಿಂದ ಚಾಕು ತೆಗೆದು ಬೆದರಿಕೆ ಹಾಕುತ್ತಿರುವುದು ಹೋಟೆಲ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಬಾಣಸವಾಡಿ ಠಾಣೆ ಪೊಲೀಸರನ್ನು ಸಂಪರ್ಕಿಸಿ ಘಟನೆ ಸಂಬಂಧ ದೂರು ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಹೋಟೆಲ್ ಮಾಲೀಕರಿಂದ ದೂರು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.