

ಚಿತ್ರದುರ್ಗ: ಸ್ತ್ರೀಯರ ಮೇಲಿನ ದೌರ್ಜನ್ಯ ತಡೆಯಲು ಯುವಸಮೂಹ ಕಾರ್ಯಪ್ರವೃತ್ತರಾಗಬೇಕು. ಅಪರಾಧ ಕೃತ್ಯಗಳಲ್ಲಿ ಭಾಗವಹಿಸದಂತೆ ಸಂಕಲ್ಪ ತೊಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಒ.ತಿಪ್ಪೇರುದ್ರಸ್ವಾಮಿ ಹೇಳಿದರು.
ಕಾಲೇಜಿನಲ್ಲಿ ಎಐಡಿವೈಒ ಸಂಘಟನೆಯಿಂದ ಮಹಿಳೆಯ ಘನತೆ, ಮಾನವೀಯ ಮೌಲ್ಯ ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಯುವಜನ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ವಿಶ್ವದಲ್ಲೇ ಅತಿ ಹೆಚ್ಚು ಯುವಸಮೂಹ ಹೊಂದಿರುವ ದೇಶ ನಮ್ಮದು. ಅದಕ್ಕಾಗಿ ಯುವ ಭಾರತ ಎನ್ನಲಾಗುತ್ತಿದೆ. ಆದರೆ, ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕಾದ ಯುವಜನರೆ ನಿರುದ್ಯೋಗ, ಭ್ರಷ್ಟಾಚಾರ, ಮದ್ಯ-ಮಾದಕ ವ್ಯಸನ, ಸಾಂಸ್ಕೃತಿಕ ಅಧಃಪತನಗಳಿಂದ ತತ್ತರಿಸಿದ್ದಾರೆ ಎಂದು ಬೇಸರಿಸಿದರು.
ಮೈಸೂರಿನ ರೆಸ್ಕೂೃ ಎಂಬ ಎನ್‌ಜಿಒವೊಂದರ ಅಧ್ಯಯನದ ಪ್ರಕಾರ ದೇಶದಲ್ಲಿ 15ದಶಲಕ್ಷ ಅಶ್ಲೀಲ ಜಾಲತಾಣಗಳಿವೆ. ಅಲ್ಲದೆ, ಹಲವು ಸಾಮಾಜಿಕ ಜಾಲತಾಣಗಳು ಯುವಜನರ ಚಿಂತನ ಪ್ರಕ್ರಿಯೆ ನಾಶಮಾಡುತ್ತಿವೆ. ಇದಕ್ಕೆ ಪರ್ಯಾಯವಾಗಿ ವೈಜ್ಞಾನಿಕ ಮನೋಭಾವ ಬಿತ್ತಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಆರ್.ಮಂಜುನಾಥ್ ಮಾತನಾಡಿ, ಯುವಸಮೂಹ ತಕ್ಷಣದ ಸಂತೋಷಕ್ಕಾಗಿ ಮದ್ಯ, ಮಾದಕ ವ್ಯಸನಗಳಿಗೆ ದಾಸರಾಗುತ್ತಾರೆ. ಇದರಿಂದ ಮೆದುಳಿನ ತರ್ಕ ನಿಯಂತ್ರಿಸುವ ಭಾಗಕ್ಕೆ ಹಾನಿಯಾಗಿ ದಿಕ್ಕು ತಪ್ಪಿಸುತ್ತದೆ. ಅಪರಾಧಿ ಪ್ರವೃತ್ತಿಗೂ ಕಾರಣವಾಗಲಿದೆ. ಸುಂದರ ಜೀವನ ಹಾಳು ಮಾಡಿಕೊಳ್ಳುವ ಬದಲು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ ಎಚ್.ಎಸ್.ನವೀನ್‌ಕುಮಾರ್, ಎಐಡಿವೈಒ ರಾಜ್ಯ ಉಪಾಧ್ಯಕ್ಷ ಕೆ.ಕೃಷ್ಣ, ಖಜಾಂಚಿ ಜಯಣ್ಣ, ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ಮುಖ್ಯಸ್ಥ ಗಂಗಾಧರ್ ಇತರರಿದ್ದರು.