

ಸೊರಬ: ವೈಯಕ್ತಿಕವಾಗಿ ನಮ್ಮ ಪರಿಶ್ರಮ ಹಾಗೂ ಬೆವರು ಸುರಿಸಿ ಉತ್ತಮ ಸ್ಥಾನಕ್ಕೆ ಏರಿದ್ದೇವೆ. ಆದರೆ ಸೈದ್ಧಾಂತಿಕ ನಿಲುವಿನೊಂದಿಗೆ ತಳ ಸಮುದಾಯದ ಪರವಾಗಿ ಹೋರಾಟ ಮಾಡುವುದು ಕೂಡ ಬದುಕಿನ ಅವಿಭಾಜ್ಯ ಅಂಗ ಎಂದು ಚೇತನ್ ಹೇಳಿದರು.
ಪಟ್ಟಣದಲ್ಲಿ ದಲಿತ ಮುಖಂಡರು, ಸಮಾನ ಮನಸ್ಕರು ಹಾಗೂ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸಮಾನತೆ ಸಭೆಯಲ್ಲಿ ಅವರು ಮಾತನಾಡಿದರು.
ಸಮಾನತೆ ಎನ್ನುವುದು ಲಿಂಗದ ದೃಷ್ಟಿಯಿಂದ, ಶೈಕ್ಷಣಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಪ್ರಮುಖವಾಗಿದೆ. ಆದರೆ ಪ್ರಭುತ್ವವು ಅಬಲರಿಗೆ ಸಿಗದಂತೆ ನೋಡಿಕೊಂಡಿದೆ. ಈ ವಿಚಾರಧಾರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸುವಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಎಂದು ತಿಳಿಸಿದರು.
ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಭಾರತವು ಪ್ರತಿಯೊಬ್ಬ ಪ್ರಜೆಗೆ ಮನೆ ಇದ್ದಂತೆ. ನಾವು ಒಂದೇ ಕುಟುಂಬದ ಸದಸ್ಯರು. ಹೀಗಿರುವಾಗ ದೇಶದಲ್ಲಿನ ಆಸ್ತಿ, ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಉಳ್ಳವರ ಪಾಲಾಗಿರುವ ಬಂಡವಾಳ ಎಲ್ಲರಿಗೂ ಸೇರಬೇಕು ಎನ್ನುವ ಹಿನ್ನೆಲೆಯಲ್ಲಿ ಬಡವರ ಪರ ಮಾತನಾಡಿದರೆ, ಸಮಾನತೆ ಬಗ್ಗೆ ಪ್ರಭುತ್ವವನ್ನು ಪ್ರಶ್ನಿಸಿದರೆ ನಮ್ಮಂತಹವರಿಗೆ ನಗರ ನಕ್ಸಲೆಟ್ ಪಟ್ಟ ಕಟ್ಟಿ ಪ್ರಕರಣ ದಾಖಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುರುರಾಜ್, ನಾಗಪ್ಪ ಮೇಷ್ಟ್ರು, ಬಸವರಾಜಪ್ಪ, ಮೆಹಬೂಬ್, ರೆಹಮಾನ್ ಸಾಬ್, ಶ್ರೀಕಾಂತ್ ಚಿಕ್ಕಶಕುನ, ರತ್ನಮ್ಮ, ಶೇಖರಮ್ಮ, ರುದ್ರಪ್ಪ, ನಾಗರಾಜ್ ಹಾಗೂ ಸಮಾನ ಮನಸ್ಕರು ಇದ್ದರು.