ಸೈಟ್ ಮಾರಾಟದ ನೆಪದಲ್ಲಿ 56 ಲಕ್ಷ ಧೋಖಾ

Fruad
Published on

ಬೆಂಗಳೂರು: ಸೈಟ್ ಮಾರಾಟ ನೆಪದಲ್ಲಿ ಉದ್ಯವಿಯಿಂದ 56 ಲಕ್ಷ ರೂ. ಮುಂಗಡ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ದಂಪತಿ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾದಹಳ್ಳಿ ವಿಲೇಜ್ ಹಾಲಿವುಡ್ ಟೌನ್ ನಿವಾಸಿ ಜಾನ್ ರಾಬರ್ಟ್ ಕೊಲಾಕೋ ವಂಚನೆಗೆ ಒಳಗಾದ ಉದ್ಯಮಿ. ಇವರು ನೀಡಿದ ದೂರಿನ ಮೇರೆಗೆ ಎ. ಶಿವಲಿಂಗಯ್ಯ ಮತ್ತು ಆತನ ಪತ್ನಿ ಭವಾನಿ ರೆಡ್ಡಿ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಲಿಂಗಯ್ಯ ಮತ್ತು ಅವರ ಪತ್ನಿ ಭವಾನಿ ರೆಡ್ಡಿ ದೇವನಹನಹಳ್ಳಿ ತಾಲೂಕು ಸಾದಹಳ್ಳಿ ವಿಲೇಜ್ ಸರ್ವೆ ನಂಬರ್ 227 ಮತ್ತು 228ರಲ್ಲಿನ ಸ್ವಿಸ್ ಟೌನ್‌ನಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದ ಸೈಟ್ ಹೊಂದಿದ್ದಾರೆ. ಹಣದ ಅವಶ್ಯಕತೆ ಇದ್ದ ಕಾರಣ ಮಾರಾಟ ಮಾಡುವುದಾಗಿ 2016ರಲ್ಲಿ ಉದ್ಯಮಿ ಜಾನ್‌ಗೆ ಶಿವಲಿಂಗಯ್ಯ ಹೇಳಿದ್ದಾರೆ.

ಪ್ರತಿ ಚದರ ಅಡಿಗೆ 3 ಸಾವಿರ ರೂ.ನಂತೆ 1.80 ಕೋಟಿ ರೂ. ಗೆ ಮಾತುಕತೆ ನಡೆಸಿದ್ದರು. ಜಾನ್ ತಮ್ಮ ಸ್ನೇಹಿತ ಆರ್.ಎನ್.ವಾಸುದೇವ್ ಜತೆಗೆ ಈ ನಿವೇಶನ ಖರೀದಿಸಲು ನಿರ್ಧರಿಸಿ ಶಿವಲಿಂಗಯ್ಯಗೆ ಮುಂಗಡವಾಗಿ 30 ಲಕ್ಷ ರೂ. ನೀಡಿದ್ದರು.

ಶಿವಲಿಂಗಯ್ಯ ತಮ್ಮ ಮಗಳ ಮದುವೆ ಎಂದು ಮತ್ತೆ 10 ಲಕ್ಷ ರೂ. ಪಡೆದುಕೊಂಡಿದ್ದಾರೆ. ನಂತರ ವಿವಿಧ ಕಾರಣ ಹೇಳಿ ನಿವೇಶನ ನೋಂದಣಿ ಪ್ರಕ್ರಿಯೆ ಮುಂದೂಡಿದ್ದಾರೆ. ಕೊನೆಗೆ ಹಿಂದಿನ ದರಕ್ಕೆ ಸೈಟ್ ಮಾರಾಟ ಸಾಧ್ಯವಿಲ್ಲ. ಪ್ರತಿ ಚದರ ಅಡಿಗೆ 3,625 ರೂ.ನಂತೆ 2.17 ಕೋಟಿ ರೂ.ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಜಾನ್ ರಾಬರ್ಟ್ ಒಪ್ಪಿದ್ದಾರೆ.

ಮತ್ತೆ ಶಿವಲಿಂಗಯ್ಯ ಮುಂಗಡವಾಗಿ 16 ಲಕ್ಷ ರೂ. ಪಡೆದು ಸೈಟ್ ನೋಂದಣಿ ಮಾಡಿಕೊಡದೆ ಶಿವಲಿಂಗಯ್ಯ ಅಂದು ತಪ್ಪಿಸಿಕೊಂಡಿದ್ದಾರೆ. 2022ರಲ್ಲಿ ಸದಾಶಿವನಗರ ಮನೆ ಖಾಲಿಕೊಂಡು ಶಿವಲಿಂಗಯ್ಯ ಬೇರೆಗೆ ಹೋಗಿದ್ದಾರೆ. ಮೊಬೈಲ್ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾರೆ ಎಂದು ಜಾನ್ ರಾಬರ್ಟ್ ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net