‘ಸೆಲಬ್ರೇಷನ್ ಮೈಸೂರು’ ರಸ್ತೆ ಓಟಕ್ಕೆ ಉತ್ತಮ ಪ್ರತಿಕ್ರಿಯೆ

16
Published on

ನಗರದಲ್ಲಿ ಭಾನುವಾರ ನಡೆದ ‘ಸೆಲಬ್ರೇಷನ್ ಮೈಸೂರು’ ರಸ್ತೆ ಓಟ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾಗಿ ಅಲ್ಲೇ ಕೊನೆಗೊಂಡ 10ಕೆ ಓಟ ಸ್ಪರ್ಧೆಯಲ್ಲಿ ನೂರಾರು ಜನ ಓಡಿ ಸಂಭ್ರಮಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಭಾಗವಹಿಸಿ ಗಮನ ಸೆಳೆದರು. ಬಳಿಕ ಮಾತನಾಡಿದ ಅವರು, ಎಲ್ಲರೂ ಅರೋಗ್ಯವಾಗಿರಬೇಕೆಂಬ ಏಕೈಕ ಉದ್ದೇಶದೊಂದಿಗೆ ‘ಸೆಲಬ್ರೇಷನ್ ಮೈಸೂರು’ ಎಂಬ ಹೆಸರಿನಲ್ಲಿ ಭಾನುವಾರ ನಡೆದ ಓಟದಲ್ಲಿ ಭಾಗಿಯಾಗಿದ್ದು ನಿಜಕ್ಕೂ ಖುಷಿ ನೀಡಿತು ಎಂದರು.

ಓಟ ದೈಹಿಕ ಶಕ್ತಿಗೆ ಮಾತ್ರವಲ್ಲ, ಮಾನಸಿಕ ವ್ಯಕ್ತಿತ್ವ ವಿಕಸನ ಸಹಕಾರಿಯಾಗುತ್ತದೆ. ನಿತ್ಯವೂ ನಾನು ಜಾಗಿಂಗ್, ದೈಹಿಕ ವ್ಯಾಯಾಮ ಮಾಡುತ್ತೇನೆ ಎಂದರು. ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ನಮ್ಮ ಮೈಸೂರು ಆಯುರ್ವೇದ ಮಹತ್ವದ ಕೊಡುಗೆ ನೀಡಿದೆ. ಈಗ ಯೋಗ ವಿಶ್ವಮಟ್ಟದಲ್ಲಿಯೂ ಮನ್ನಣೆ ಪಡೆದುಕೊಂಡಿದೆ. ಇದು ಆರೋಗ್ಯ ವೃದ್ಧಿಸುವ ಮತ್ತೊಂದು ಕ್ರಮವಾಗಿದೆ ಎಂದರು.

ಯುವಕರು ಈಗ ಓಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ನೋಡಿ ಖುಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದಲ್ಲಿ ಫಿಟ್ ಇಂಡಿಯಾ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಆಗ ನಮ್ಮ ನಾಡು, ದೇಶವು ಆರೋಗ್ಯವಂತವಾಗಿರುತ್ತದೆ ಎಂದರು. ಮುಂದಿನ ದಿನಗಳಲ್ಲಿ ಈ ರೀತಿಯ ಆರೋಗ್ಯ ಪೂರಕ ಯೋಜನೆಗಳನ್ನು ಎಲ್ಲರೂ ಕೈಗೊಳ್ಳೋಣ ಎಲ್ಲರೂ ಆರೋಗ್ಯ ಸಿರಿ ಪಡೆಯೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net