

ಕಳಸ : ಒಂದೂವರೆ ದಶಕದ ಹಿಂದೆ 30 ಹಾಸಿಗೆಯುಳ್ಳ ಸಮುದಾಯ ಆಸ್ಪತ್ರೆ ಮಂಜೂರಾದಾಗ ಇಲ್ಲಿಯ ಸಾಮಾನ್ಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ದುಪ್ಪಟ್ಟು ಹಣ ನೀಡಿ ಖಾಸಗಿ ಆಸ್ಪತ್ರೆಗೆ ಅಲೆದಾಡುವ ಕೆಲಸ ತಪ್ಪಬಹುದು ಎನ್ನುವ ಜನರ ನಿರೀಕ್ಷೆ ಹುಸಿಯಾಗಿದೆ. ಆಸ್ಪತ್ರೆಯಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗದೆ ಕಾರ್ಮಿಕ ವರ್ಗ, ಸಾಮಾನ್ಯ ಜನರು ಪರದಾಡುವಂತಾಗಿದೆ.
ಇಲ್ಲಿ ನಾಲ್ಕು ಕಾಯಂ ವೈದ್ಯರ ಪೈಕಿ ಒಬ್ಬರು ಕಡ್ಡಾಯ ಗ್ರಾಮೀಣ ಸೇವೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ನಾಲ್ಕೂ ಹುದ್ದೆ ಖಾಲಿ ಇದೆ. 6 ಶುಶ್ರೂಷಕಿಯರ ಪೈಕಿ 3 ಖಾಲಿ ಇದೆ. 2 ಾರ್ಮಸಿಸ್ಟ್ ಹುದ್ದೆ, ವಾಹನ ಚಾಲಕ 2 ಹುದ್ದೆ ಹಾಗೂ 12 ಡಿ ಗ್ರ್ೂ ನೌಕರರ ಪೈಕಿ 11 ಖಾಲಿ ಇದೆ. ಹೀಗೆ ಒಟ್ಟು 47 ಹುದ್ದೆಗಳ ಪೈಕಿ 41 ಹುದ್ದೆಗಳು ಖಾಲಿ ಇದ್ದು ಕೇವಲ 6 ಸಿಬ್ಬಂದಿ ಕಾಯಂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುತ್ತಿಗೆ ಆಧಾರದಲ್ಲಿರುವ ಬೆರಳೆಣಿಕೆಯಷ್ಟು ಸಿಬ್ಬಂದಿ ಇಡೀ ಆಸ್ಪತ್ರೆ ನಿಭಾಯಿಸುವ ಪರಿಸ್ಥಿತಿ ಇದೆ. ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಇದ್ದಾಗ ಸಾಕಷ್ಟು ರೋಗಿಗಳು ಬಂದು ಇಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ರೋಗಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಬೆಡ್ಡ್‌ಗಳು ಖಾಲಿಯಾಗಿವೆ. ವೈದ್ಯರ ಕೊರತೆಯಿಂದಾಗಿ ರೋಗಿಗಳು ಅನಿವಾರ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಅವಘಡಗಳು ಸಂಭವಿಸಿದಾಗ ಸೂಕ್ತ ಚಿಕಿತ್ಸೆ ಸಿಗದೆ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ದಿನಪೂರ್ತಿ ಕಾಯುವಂತಾಗಿದೆ. ತುರ್ತು ಪರಿಸ್ಥಿತಿಯಾದರೆ ಮೂಡಿಗೆರೆ ಅಥವಾ ಚಿಕ್ಕಮಗಳೂರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ಮಾಡಬೇಕಾಗಿದೆ.