ಸಿದ್ದರಾಮಯ್ಯಗೆ ನ್ಯಾಯಾಲಯ ಮೇಲೆ ಗೌರವ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಓಂಶಕ್ತಿ ಚಲಪತಿ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದೆ. ಕಾನೂನಿಗೆ ಗೌರವ ಕೊಟ್ಟು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ದೂರ ಇದ್ದು ತನಿಖೆಗೆ ಸಹಕರಿಸಬೇಕು ಎಂದು ಕುಡಾ ಮಾಜಿ ಅಧ್ಯಕ್ಷ ಹಾಗೂ ಕುರುಬ ಸಮಾಜದ ಮುಖಂಡ ಓಂಶಕ್ತಿ ಚಲಪತಿ ಒತ್ತಾಯಿಸಿದ್ದಾರೆ

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಒತ್ತಾಯಿಸಿದ ಅವರು ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಯಾವುದೇ ತಪ್ಪು ಮಾಡಿಯೇ ಇಲ್ಲ ಎಂದು ಸಿದ್ಧರಾಮಯ್ಯ ನವರೇ ಹೇಳುತ್ತಿದ್ದಾರೆ. ಆದರೆ ಅವರು ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡಬೇಕು. ಕುರುಬ ಸಮಾಜದ ಪ್ರಭಾವಿ ಮುಖಂಡರಾಗಿದ್ದು, ಎಷ್ಟೇ ಕಳಂಕರಹಿತರಾಗಿದ್ದರೂ ಸಮುದಾಯದ ಹಿತದೃಷ್ಟಿಯಿಂದ ರಾಜೀನಾಮೆ ಕೊಟ್ಟು ತನಿಖೆ ಮುಗಿಸಿ ಕ್ಲೀನ್ ಚಿಟ್ ಪಡೆದ ಬಳಿಕ ಮತ್ತೆ ಮುಖ್ಯಮಂತ್ರಿಯಾಗಿ ಬರಲಿ ಎಂದರು.

ಮುಡಾ ಹಗರಣದಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಿಸಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ತಮ್ಮ ಸ್ಥಾನದಲ್ಲಿ ಇದ್ದಾಗ ಯಾವುದೇ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.

ಹಿಂದೆ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ವಿರೋಧ ಪಕ್ಷದಲ್ಲಿ ಇದ್ದ ಸಿದ್ದರಾಮಯ್ಯ ನವರು ರಾಜೀನಾಮೆಗೆ ಒತ್ತಾಯಿಸಿದ್ದರು. ಆದರೆ ಇಂದು ಅಂತಹುದೇ ಪರಿಸ್ಥಿತಿ ಸಿದ್ದರಾಮಯ್ಯ ಮೇಲೆ ಬಂದಿದೆ. ನೈತಿಕತೆಯಿಂದ ಎಲ್ಲರನ್ನೂ ಪ್ರಶ್ನೆ ಮಾಡುವ ಸಿದ್ದರಾಮಯ್ಯ ಅವರು ಅದೇ ನೈತಿಕತೆಯನ್ನು ಉಳಿಸಿಕೊಳ್ಳಬೇಕಾದರೆ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಚಿತ್ರ ೨೭ ಕೆ.ಎಲ್.ಆರ್. ೦೫ : ಓಂಶಕ್ತಿ ಚಲಪತಿ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net