

ಬಾಗಲಕೋಟೆ: ಒಳ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಆದರೇ ವಿ.ಪಕ್ಷ ನಾಯಕ ಸಿದ್ದರಾಮಯ್ಯ ಅಡ್ಡಿ ಪಡಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಆರೋಪಿಸಿದರು.
ಕೊಪ್ಪಳ ಹಾಗೂ ಬಾದಾಮಿಯಲ್ಲಿ ಬೆಂಬಲಿಗರೊಂದಿಗೆ ಮಾತನಾಡುವಾಗ ನಾನು ಸಿಎಂ ಇದ್ದಾಗ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ತಡೆದಿದ್ದೆ ಅಂತ ಹೇಳಿದ್ದಾರೆ. ಕೆಲವು ಕಡೆ ನನ್ನ ಬೆಂಬಲ ಇದೆ ಅಂತ ತಿಳಿಸಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಅವರನ್ನು ಸೋಲಿಸುವ ಮೂಲಕ ಪರಿಶಿಷ್ಟರ ವಿರುದ್ಧ ರಾಜಕಾರಣ ಮಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ನೀಡಲಾಗಿದೆ. ಅದೇ ರೀತಿ ಪರಿಶಿಷ್ಟ ಜಾತಿಯಲ್ಲಿಯೂ ಜನಸಂಖ್ಯೆ ಆಧಾರಿತ ಒಳ ಮೀಸಲಾತಿ ನೀಡಬೇಕು. ಒಳ ಮೀಸಲಾತಿ ವಿರೋಧಿಸುವ ಮೂಲಕ ಅಸ್ಪೃಶ್ಯತೆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಸಿದ್ದರಾಮಯ್ಯ. ನಾಗ ಮೋಹನ ದಾಸ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದಕ್ಕೂ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ದಲಿತ ಸಮುದಾಯ ಕಾಂಗ್ರೆಸ್‌ನಿಂದ ಹೊರ ಬರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡದಿದ್ದರೇ ತಮ್ಮ ಸಂಘಟನೆಯಿಂದ ನಿಲವು ಏನು ಪ್ರಶ್ನೆಗೆ ಉತ್ತರಿಸಲು ಮುತ್ತಣ್ಣ ಬೆಣ್ಣೂರ, ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸುವುದರೊಳಗೆ ಒಳ ಮೀಸಲಾತಿ ಜಾರಿಗೊಳಿಸುವ ವಿಶ್ವಾಸವಿದೆ. ಈಗಾಗಲೇ ಆಯೋಗದ ವರದಿ ಜಾರಿಗೆ ಉಪಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು.
ಸಮಗಾರ ಸಮಾಜದ ರಾಜ್ಯ ಘಟಕದ ಉಪಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ ಮಾತನಾಡಿ, ಕಾಂಗ್ರೆಸ್ ಸಮಾಜದ ಜನರಲ್ಲಿ ಅನಾವಶ್ಯಕವಾಗಿ ಗೊಂದಲಗಳನ್ನು ಸೃಷ್ಟಿಸುತ್ತಿದೆ ಎಂದು ದೂರಿದರು.