

ಬಾಳೆಹೊನ್ನೂರು: ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆಯು ವಿವಿಧ ಕಂಪನಿಗಳನ್ನು ಸಂಪರ್ಕಿಸಿ ಅವರಿಂದ ಸಿಎಸ್‌ಆರ್ ನಿಧಿಗಳನ್ನು ಪಡೆದು ಸಮಾಜದಲ್ಲಿ ತಮ್ಮ ಸೇವಾ ಚಟುವಟಿಕೆಗಳನ್ನು ಸಕ್ರಿಯಗೊಳಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ಸೀಗೋಡು ನಾಗಲಕ್ಷ್ಮೀ ಸಭಾ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಸಾವಿರಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಕೋಟ್ಯಂತರ ರೂ. ಸಿಎಸ್‌ಆರ್ ನಿಧಿಗಳಿರುತ್ತವೆ. ಅದನ್ನು ಅವರು ಸಮಾಜಕ್ಕೆ ವಿನಿಯೋಗಿಸಬೇಕಾಗಿದ್ದು ಕೆಲವೊಮ್ಮೆ ಈ ನಿಧಿಯನ್ನು ನೇರವಾಗಿ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ನಿಧಿಗೆ ವರ್ಗಾಯಿಸುತ್ತಿದ್ದಾರೆ.
ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ ಜೋಷಿ ಮಾತನಾಡಿ, ಸದೃಢ ಸಮಾಜಕ್ಕೆ ಉತ್ತಮ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಶಿಕ್ಷಕರಿಗೆ ಉತ್ತಮ ತರಬೇತಿ ಶಿಬಿರಗಳನ್ನು ಆಯೋಜಿಸಿ ತರಬೇತುಗೊಳಿಸುತ್ತಿದೆ. ಉತ್ತಮ ಪರಿಸರ ನಿರ್ಮಾಣಕ್ಕಾಗಿ ರೋಟರಿ ಸಂಸ್ಥೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ 10 ಸಾವಿರಕ್ಕೂ ಅಧಿಕ ವಿವಿಧ ಪರಿಸರ ಪೂರಕ ಗಿಡಗಳನ್ನು ವಿತರಿಸಲಾಗಿದೆ.
ಇದೇ ಸಂದರ್ಭದಲ್ಲಿ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಉದ್ಯಮಿ ಮಾಲತೇಶ್ ಸಿಗಸೆ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ವಿಭಾಗದ ಆರೋಗ್ಯ ಯೋಜನೆಯ ಅಧ್ಯಕ್ಷ ಡಾ. ಎಂ.ಬಿ.ರಮೇಶ್ ಅವರು ಬರೆದ ಆರೋಗ್ಯ ಮತ್ತು ಜೀವನ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ತಿಮ್ಮಯ್ಯಗೌಡ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ವಲಯಾಧಿಕಾರಿ ಎಂ.ಸಿ.ಯೋಗೀಶ್, ಕಾರ್ಯದರ್ಶಿ ಸೈಯ್ಯದ್ ಾಜಿಲ್ ಹುಸೇನ್, ಪ್ರಮುಖರಾದ ರೇಖಾ ಪಾಲಾಕ್ಷ, ಡಾ.ಎಂ.ಬಿ.ರಮೇಶ್, ಕೆ.ಟಿ.ವೆಂಕಟೇಶ, ಸಿ.ವಿ.ಸುನೀಲ್, ಸಿ.ಪಿ.ರಮೇಶ್, ಎಚ್.ಎಚ್.ಕೃಷ್ಣಮೂರ್ತಿ, ಡಾ.ನವೀನ್ ಮಿಸ್ಕಿತ್, ನಟರಾಜ್‌ಶೆಟ್ಟಿ, ಎ.ಸಿ.ಸಂದೇಶ್ ಮತ್ತಿತರರಿದ್ದರು.