ಸಾಲ ತೀರಿಸಲು ವಾಹನ ಕಳವು ಮಾಡುತ್ತಿದ್ದ

Published on

ಬೆಂಗಳೂರು: ಸಾಲ ತೀರಿಸಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಗಾಯತ್ರಿನಗರದ ವಿಜಯ್ ಕುಮಾರ್ ಅಯ್ಯರ್ (23) ಬಂಧಿತ. ಆರೋಪಿಯಿಂದ 5 ಪ್ರಕರಣಗಳು ಪತ್ತೆಯಾಗಿದ್ದು, 2 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ. 19ರಂದು ಗಾಯತ್ರಿನಗರದ 9ನೇ ಕ್ರಾಸ್‌ನಲ್ಲಿ ಅನಿಲ್ ಕುಮಾರ್ ಎಂಬುವರು ಮನೆ ಮುಂದೆ ಸ್ಕೂಟರ್ ನಿಲ್ಲಿಸಿದ್ದರು. ರಾತ್ರಿ ವೇಳೆಗೆ ನಾಪತ್ತೆಯಾಗಿತ್ತು.  ಈ ಕುರಿತು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಸಿಸಿ ಕ್ಯಾಮರಾಗಳ ಪರಿಶೀಲನೆ ವೇಳೆ ಆರೋಪಿಯ ಮುಖಚಹರೆ ಸೆರೆಯಾಗಿತ್ತು. ಮಂಗಳವಾರ ಸಂಜೆ 5.30ರಲ್ಲಿ ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದ ಸಮೀಪ ಅನುಮಾನಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ. ಕರ್ತವ್ಯದಲ್ಲಿದ್ದ ಸಿಬ್ಬಂದಿ ಆತನನ್ನು ತಡೆದು ವಾಹನದ ದಾಖಲಾತಿಗಳನ್ನು ಕೇಳಿದ್ದರು. ಆತನ ಬಳಿ ಯಾವುದೇ ರೀತಿಯ ದಾಖಲಾತಿಗಳಿರಲಿಲ್ಲ. ಕಳ್ಳತನದ ವಾಹನ ಎಂಬುದು ಗೊತ್ತಾಗಿತ್ತು. ಕೂಡಲೇ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ವಿವಾಹಿತನಾಗಿರುವ ವಿಜಯ್ ಕುಮಾರ್ ದುಶ್ಚಟಗಳಿಗೆ ದಾಸನಾಗಿದ್ದ. ಕುಡಿದು ಬಂದು ಪತ್ನಿ ಜತೆ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಆಕೆ ತವರು ಮನೆ ಸೇರಿದ್ದಳು. ಜೂಜಾಟ ಹಾಗೂ ಕುಡಿತಕ್ಕಾಗಿ 40 ಸಾವಿರ ರೂ. ಸಾಲ ಮಾಡಿಕೊಂಡಿದ್ದ. ಪತ್ನಿ ಬಿಟ್ಟು ಹೋದ ಬಳಿಕ ಖರ್ಚಿಗೆ ಹಣಕಾಸಿನ ಸಮಸ್ಯೆಯಾಗಿತ್ತು. ಸಾಲ ತೀರಿಸಲು ಹಾಗೂ ಖರ್ಚಿಗೆ ಹಣಕ್ಕಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಕೋಣನಕುಂಟೆ, ಸುಬ್ರಮಣ್ಯನಗರ ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net