

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿವಾಸಿ ಹಾಡಿಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಸೋಮವಾರ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅಹವಾಲು ಸ್ವೀಕರಿಸಿದರು.
ಮೌಲ್ಯಯುತ ಮತ್ತು ನ್ಯಾಯಸಮ್ಮತ ರಾಜಕಾರಣಕ್ಕೆ ಒತ್ತು ನೀಡುವುದರ ಜತಗೆ ಅಭಿವೃದ್ಧಿಯತ್ತ ಗಮನಹರಿಸಲಾಗುವುದು. ತಾಲೂಕು ಮಟ್ಟದ ಅಧಿಕಾರಿಗಳನ್ನು ಗ್ರಾಮ ಮಟ್ಟಕ್ಕೆ ಕರೆದೊಯ್ದು ಸ್ಥಳದಲ್ಲಿಯೇ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಸಾರ್ವಜನಿಕರು ಹಾಗೂ ಆದಿವಾಸಿಗಳ ಸಮಸ್ಯೆಗಳಿಗೆ ತಾಲೂಕಿನ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹರೀಶ್‌ಗೌಡ ಎಚ್ಚರಿಸಿದರು.
ಅಹವಾಲು ಸ್ವೀಕಾರ: ಕೊಳುವಿಗೆ ಮುಖ್ಯ ರಸ್ತೆ, ನೀರುಹೊಳೆ, ಪಟ್ಲದಮ್ಮ ದೇವಸ್ಥಾನ, ಕಾಲುವೆ ಏರಿ ರಸ್ತೆ ದುರಸ್ತಿಯಾಗಬೇಕು. ಗ್ರಾಮದೊಳಗಿರುವ ಜಮೀನು ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸಬೇಕು. ಕೋಣನ ಹೊಸಳ್ಳಿಗೆ ಬಸ್ ಕಲ್ಪಿಸಿಕೊಡಬೇಕು ಎಂದು ಕೊಳುವಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಮೊದಲ ಅನುದಾನದಲ್ಲಿಯೇ ಕೊಳುವಿಗೆ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಜಮೀನು ರಸ್ತೆಗಳು, ಪೋಡಿ ಸಾಗುವಳಿ, ಖಾತೆ ಬದಲಾವಣೆ, ಕಾಲುವೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಕಟ್ಟನಾಯಕ, ಗ್ರಾಪಂ ಅಧ್ಯಕ್ಷ ಸುಭಾಷ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಂಪೇಗೌಡ, ಹನಗೋಡು ಸಹಕಾರ ಬ್ಯಾಂಕ್ ಅಧ್ಯಕ್ಷ ರವಿಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬೀರಪ್ಪ, ಮುಖಂಡಾರದ ರಾಜೇಗೌಡ (ಅಜ್ಜ) ವೆಂಕಟೇಶ್, ನಟರಾಜ್, ನಾಗೇಶ್, ಮಹದೇವಪ್ಪ, ಪಾರೆ ಕುಮಾರ್ ,ಹರೀಶ್, ಆರ್.ಸ್ವಾಮಿ, ಶಿವಣ್ಣ ಇತರರು ಇದ್ದರು.
ಇದಕ್ಕೂ ಮುನ್ನ ಇತಿಹಾಸ ಪ್ರಸಿದ್ಧ ದೊಡ್ಡಹೆಜ್ಜೂರು ಆಂಜನೇಯಸ್ವಾಮಿ ಹಾಗೂ ಕೊಳವಿಗೆ ರಾಮಲಿಂಗೇಶ್ವರ ದೇವಾಲಯಕ್ಕೆ ನೂತನ ಶಾಸಕರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.