ಸಾಧನೆಗೆ ನಿಯಮಗಳನ್ನು ಪಾಲಿಸಿ

21
Published on

ಜಯನಗದ ಬಾಲೋದ್ಯಾನ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ವಿದ್ಯಾರ್ಥಿ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ನಡೆಯಿತು.

ಅಸಿಸ್ಟೆಂಟ್ ಕಮಿಷನರ್ ಸಂದೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿ ಚುನಾವಣೆಯಲ್ಲಿ ಜಯ ಗಳಿಸಿದ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ಸರ್ಕಾರದ ಆಯ್ಕೆಯಲ್ಲಿ ಜನರು ಪಾಲ್ಗೊಂಡು ತಮ್ಮ ಪ್ರತಿನಿಧಿಗಳನ್ನು ಆರಿಸುವಂತೆಯೇ ನಿಮ್ಮ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆಯ ಪ್ರಕ್ರಿಯೆಗಳು ನಡೆದು ನಿಮ್ಮ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ. ಇಂತಹ ಪದಗ್ರಹಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಈ ಶಾಲೆಯ ಕಾರ್ಯ ತುಂಬಾ ಪ್ರಶಂಸನೀಯ ಎಂದರು.

ಜೀವನದಲ್ಲಿ ಉನ್ನತವಾದ ಗುರಿಗಳನ್ನು ಇಟ್ಟುಕೊಂಡು ಸಾಧನೆ ಮಾಡಬೇಕಾದರೆ ಸಮಯ ನಿರ್ವಹಣೆ, ಒಳ್ಳೆಯ ಆಹಾರ ಅಭ್ಯಾಸ, ಶಾರೀರಿಕ ಮತ್ತು ಮಾನಸಿಕ ಸದೃಢತೆ, ಜ್ಞಾನ ಗಳಿಕೆ, ಸಾಮಾಜಿಕ ಕಾಳಜಿ, ಕಾನೂನು ಪಾಲನೆ, ಮೊಬೈಲ್ ಮುಂತಾದ ಸಾಧನೆಗಳ ಸದ್ಬಳಕೆ, ಮಾದಕ ವಸ್ತು ಮುಂತಾದ ವ್ಯಸನಗಳಿಂದ ದೂರವಿರುವಂತಹ ಎಂಟು ನಿಯಮಗಳನ್ನು ನೀವು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಎಸ್.ನಾಗೇಶ್ ಮಾತನಾಡಿದರು. ಮುಖ್ಯ ಆಡಳಿತ ಅಧಿಕಾರಿ ಭವಾನಿ ನಾಗೇಶ್, ಪ್ರಾಂಶುಪಾಲೆ ಎಚ್.ಎಂ.ಸುಮಾ ಅವರು ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು.

ಶಿಕ್ಷಕ ವಿಶ್ವಾಸ್ ಪ್ರೇಮ್ ಕುಮಾರ್ ಅವರು ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಸಿಕೊಟ್ಟರು. ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಮಾತನಾಡಿ, ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಹಾಗೂ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ಪಥಸಂಚಲನ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಕೆ ಮುಂತಾದ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net