

ಶೃಂಗೇರಿ: ತಾಲೂಕಿನ ಹೊನ್ನವಳ್ಳಿ ರೈತ ಎಚ್.ಟಿ.ರಮೇಶ್ ಬೆಳೆದಿರುವ ಭತ್ತದ ತಳಿ ಸಹ್ಯಾದ್ರಿ ಜಲಮುಕ್ತಿ ಮಲೆನಾಡಿಗೆ ಸೂಕ್ತವಾಗಿದೆ. ಬದಲಾಗಿರುವ ಹವಾಮಾನಕ್ಕೆ ಹೊಂದಿಕೊಂಡಿದ್ದು ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮಲೆನಾಡಿನ ಜೌಗು (ಹೆಚ್ಚು ನೀರು ನಿಲ್ಲುವ ಗದ್ದೆ) ಪ್ರದೇಶಕ್ಕೆ ಸಂಶೋಧಿಸಿರುವ ಭತ್ತದ ತಳಿ ಸಹ್ಯಾದ್ರಿ ಜಲಮುಕ್ತಿ ಬೆಳೆದಿದ್ದು ಉತ್ತಮ ಫಸಲು ಬಂದಿದೆ. ಭತ್ತದ ತೆನೆಯು ಜೊಳ್ಳಾಗಿರದೆ ಸದೃಢವಾಗಿದ್ದು ಪ್ರತಿ ತೆನೆಯಲ್ಲೂ ಭತ್ತದ ಕಾಳು ಅಧಿಕವಾಗಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಗಾಳಿ, ಮಳೆ ಬಂದಾಗ ಭತ್ತದ ಪೈರು ಅಡ್ಡಬಿದ್ದು ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿತ್ತು. ಹೊಸ ತಳಿ ಇದರಿಂದ ಹೊರತಾಗಿದ್ದು ಅಕಾಲಿಕ ಮಳೆ ನಡುವೆ ಸಮೃದ್ಧವಾಗಿ ತಲೆಯೆತ್ತಿ ನಿಂತಿದೆ.
2019ರಿಂದ ಭತ್ತದ ಗದ್ದೆ ಹಾಳು ಬಿದ್ದಿರುವುದಕ್ಕೆ ಪರಿಹಾರ ಕಂಡುಕೊಳ್ಳಲು ವಿಶೇಷ ಆಸಕ್ತಿ ವಹಿಸಿದ ಕೃಷಿಕ ಹೊನ್ನವಳ್ಳಿ ರಮೇಶ್, ಮೊದಲ ವರ್ಷ ತಮ್ಮ ಗದ್ದೆಯಲ್ಲಿ ಯಾಂತ್ರೀಕೃತ ನಾಟಿ ಮಾಡಿಸಿದ್ದಲ್ಲದೆ ಕಟಾವು, ಒಕ್ಕಣೆಯನ್ನು ಯಾಂತ್ರಿಕರಿಸಿ ಬೇರೆ ರೈತರನ್ನು ಪ್ರೋತ್ಸಾಹಿಸಿದರು. ಇದರ ಫಲವಾಗಿ 2019ರಲ್ಲಿ 12 ಎಕರೆ ನಾಟಿಯಾಗಿದ್ದ ಭತ್ತದ ಪ್ರದೇಶ ಈ ವರ್ಷ ಸುತ್ತಮುತ್ತಲಿನ 325 ರೈತರಿಗೆ ಪ್ರೇರಣೆಯಾಗಿ ಸುಮಾರು 425 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ.
ಭತ್ತದ ಗದ್ದೆ ಕೆಲಸವೇ ಕೆಸರಿನಲ್ಲಿ ಮಾಡುವುದು. ನಿಗದಿತ ವೇಳೆಯಲ್ಲಿ ಹೆಚ್ಚು ಕಾರ್ಮಿಕರ ಅವಲಂಬನೆ ಬೇರೆ. ದಿನವಿಡೀ ಕೆಲಸವಾಗಿರುವುದರಿಂದ ಕಾರ್ಮಿಕರಿಗೆ ಊಟೋಪಚಾರದ ಅನಿವಾರ್ಯತೆ ಇರುತ್ತದೆ. ಇದಕ್ಕೆಲ್ಲಾ ಪರಿಹಾರವೆಂಬಂತೆ ಮಲೆನಾಡಿಗೂ ಸೂಕ್ತವಾಗುವ ನಾಟಿ, ಕಟಾವು ಯಂತ್ರ ಬಂದಿದ್ದು ಅದನ್ನು ಅಳವಡಿಸಿಕೊಳ್ಳುವಲ್ಲಿ ಹೊನ್ನವಳ್ಳಿ ಭಾಗದ ರೈತರು ಯಶಸ್ವಿಯಾದರು. ಅದರ ಲವಾಗಿ ಇದೀಗ 425 ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ.