

ಸುತ್ತೂರು: ಸುಣ್ಣ ಮುಟ್ಟಿದರೆ ಸುಣ್ಣ, ಬೆಣ್ಣೆ ಮುಟ್ಟಿದರೆ ಬೆಣ್ಣೆ, ಸಹವಾಸದಂತೆ ನಡತೆ ಮತ್ತು ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಪ್ರಾಧ್ಯಾಪಕ ಎಚ್.ಬಿ. ದೇವಣ್ಣ ತಿಳಿಸಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಇತ್ತೀಚೆಗೆ ಶ್ರಾವಣ ಮಾಸದ 7ನೇ ದಿನದ ಪ್ರವಚನ ನೀಡಿದ ಅವರು, ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ ಇವುಗಳಿಂದ ಏನಾದಿತು? ಮನಸ್ಸಿಗೊಪ್ಪುವ ನಡತೆಯಿಂದ ಕೂಡಿದ ಸತ್ಪುರುಷರು ಕಣ್ಣಿಗೆ ಗೊಚರವಾದರೆ ಅದೇ ಸರ್ವಸ್ವ. ಸಜ್ಜನರ ಸಾಮಿಪ್ಯವೇ ನಮಗೆ ಹೆಚ್ಚಿನ ಸುಖ, ಶಾಂತಿ, ನೆಮ್ಮದಿ, ತೃಪ್ತಿ ಹಾಗೂ ಆಹ್ಲಾದವನ್ನು ನೀಡುತ್ತದೆ. ಕವಿ ಗದುಗಿನ ನಾರಾಣಪ್ಪ ಹೇಳಿದಂತೆ ಯತಿ ಕೆಡಗು ದುಸ್ಸಂಗದಲಿ, ಭೂಪತಿ ಕೆಡಗು ದುರ್ಮಂತ್ರಿಯಲಿ, ವರಸುತ ಕೆಡಗು ಲಾಲನೆಗಳಲಿ, ಕೃಷಿ ಕೆಡಗು ಉಪೇಕ್ಷೆಯಲಿ, ಮತಿ ಕೆಡಗು ಮಧುಪಾನದಲಿ, ಸದ್ಗತಿ ಕೆಡಗು ದುಶ್ಚರಿತದಲಿ, ನಿಜಸತಿ ಕೆಡಗು ದುರ್ವ್ಯಸನದಲಿ ಭೂಪಾಲ ಕೇಳೆಂದ ಎನ್ನುವಂತೆ ನಾವು ಎಂತವರ ಸಂಗ ಮಾಡುತ್ತೇವೆಯೋ ಅಂತವರ ಗುಣ ಸ್ವಭಾವಗಳು ನಮಗೆ ಅಂಟಿಕೊಳ್ಳುತ್ತವೆ ಎಂದರು.
ಹಾವು ಯಾವುದಾದರೇನು ವಿಷ ಒಂದೇ. ಆದ್ದರಿಂದ ದುರ್ಜನರ ಸಂಗದಿಂದ ದೂರವಿರಬೇಕು. ಅಂತರಂಗ, ಬಹಿರಂಗ ಶುದ್ಧರೊಡನೆಯೇ ನಮ್ಮ ಸಹವಾಸ ಇರಬೇಕು. ಅನೇಕ ತೊರೆಗಳು ಬಂದು ಸೇರಿ ಒಂದು ದೊಡ್ಡ ಸಮುದ್ರವಾದಂತೆ, ಮನುಷ್ಯನು ಕೆಲವು ವಿಷಯಗಳನ್ನು ಪರಿಣಿತರಿಂದಲೂ, ಕೆಲವನ್ನು ಶಾಸ್ತ್ರಗಳಿಂದಲೂ, ಕೆಲವನ್ನು ಇತರರ ಆಚರಣೆಯಿಂದಲೂ, ಕೆಲವನ್ನು ಸ್ವಬುದ್ಧಿಯಿಂದಲೂ, ಕೆಲವನ್ನು ಸುಜನರ ಸಹವಾಸದಿಂದಲೂ ತಿಳಿದುಕೊಳ್ಳುವುದರಿಂದ ಸರ್ವಜ್ಞನಾಗುವನು. ಸಜ್ಜನರ ಸಾಮಿಪ್ಯವನ್ನು ಬಯಸಬೇಕು. ಅಂತರಂಗ ಶುದ್ಧವಿಲ್ಲದವರೇ ದುರ್ಜನರು. ಅವರು ಹಾವಿಗೆ ಸಮಾನ. ಅಂಥವರ ಸಹವಾಸಕ್ಕೆ ಹೋಗಬಾರದು. ಸಂತರು ಹಾಗೂ ಶರಣರ ಸಂತ್ಸಂಗದಿಂದ ಮೊಕ್ಷ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಶ್ರೀ ಡಿ.ಎಂ. ಸಿದ್ದಲಿಂಗಸ್ವಾಮಿ ಅವರು ಕಾವ್ಯ ವಾಚಿಸಿದರು. ಭಕ್ತಾದಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.