ಸಹಜ ಹೆರಿಗೆಗೆ ‘ಮಿಡ್‌ವೈರಿ ಇನಿಶೇಟಿವ್’ ಯೋಜನೆ

2
Published on

ಸದ್ಯ ಸಿಸೇರಿಯನ್ ಹೆರಿಗೆ ಹೆಚ್ಚಾಗಿದ್ದು, ಈ ಪ್ರಮಾಣ ತಗ್ಗಿಸಲು ಸೂಕ್ತ ಪರಿಣತಿ, ಮುಂಜಾಗ್ರತೆ, ವಿಶೇಷ ಜ್ಞಾನವಿರುವ ಹಾಗೂ ಗಂಡಾಂತರ ಹೆರಿಗೆಯನ್ನೂ ಸಹಜ ಹೆರಿಗೆಯಾಗಿ ಪರಿವರ್ತಿಸುವ ಶುಶ್ರೂಷಕಿಯರನ್ನು ಸೃಷ್ಟಿಸುವ ಮಿಡ್‌ವೈರಿ ಇನಿಶೇಟಿವ್ ಎಂಬ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ರೀತಿ ತರಬೇತಿ ಪಡೆದ ಶುಶ್ರೂಷಕಿಯರ ಮೊದಲ ತಂಡ ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿದೆ ಎಂದು ಚೆಲುವಾಂಬ

ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರಕುಮಾರ್ ತಿಳಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಅಲ್ಯುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಶನಿವಾರ ಚಲುವಾಂಬ ಆಸ್ಪತ್ರೆ ಮತ್ತು ಆಸ್ಟ್ರಿಕಾ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಮೊದಲ ಬ್ಯಾಚ್‌ನ ತಂಡಕ್ಕೆ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ಹೆಚ್ಚಾಗುತ್ತಿರುವ ಸಿಸೇರಿಯನ್ ಹೆರಿಗೆ ತಗ್ಗಿಸಿ ಸಹಜ ಹೆರಿಗೆ ಪ್ರಮಾಣ ಹೆಚ್ಚಿಸಲು ಇದೇ ಮೊದಲ ಬಾರಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಎಸ್‌ಎಂಟಿಐ (ಸ್ಟೇಟ್ ಮಿಡ್ ವೈರಿ ಟೈನಿಂಗ್ ಇನ್‌ಸ್ಟಿಟ್ಯೂಟ್) ತರಬೇತಿ ಕೇಂದ್ರ ತೆರೆದು ಮಿಡ್‌ವೈರಿ ಇನಿಶಿಯೇಟಿವ್ ಎಂಬ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 20 ಮಂದಿ ನರ್ಸ್‌ಗಳಿಗೆ ಒಂದು ವರ್ಷಗಳ ಸಹಜ ಹೆರಿಗೆ ತರಬೇತಿ ನೀಡಲಾಗಿದೆ. ಇವರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಸಹಜ ಹೆರಿಗೆ ಮಾಡಿಸಲಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಸೂಚ್ಯಂಕದ ಪ್ರಕಾರ ಜಿಲ್ಲಾ ಮಟ್ಟದ ಹೆರಿಗೆ ಆಗತ್ರೆಗಳಲ್ಲಿ ವಾರ್ಷಿಕ ಶೇ.20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸಿಸೇರಿಯನ್‌ಗಳಾಗಬೇಕು. ಆದರೆ, ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸಹಜ ಹೆರಿಗೆಗಳನ್ನು ಅಲ್ಲಿಯೇ ಮಾಡಿ, ಗಂಡಾಂತರವಿರುವ ಹೆರಿಗೆ ಪ್ರಕರಣಗಳನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಹೀಗಾಗಿ ಈ ಆಸ್ಪತ್ರೆಯಲ್ಲಿ ಶೇ.35ರಿಂದ 40ರಷ್ಟು ಹೆರಿಗೆಗಳನ್ನು ಶಸ್ತ್ರಚಿಕಿತ್ಸೆಯಿಂದಲೇ ನೆರವೇರಿಸಲಾಗುತ್ತಿದೆ. ಆದ್ದರಿಂದ ಸಹಜ ಹೆರಿಗೆಗೆ ಆದ್ಯತೆ ನೀಡುವ ದಾದಿಯರನ್ನು ಸೃಷ್ಟಿಸಲು ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯ ತಾಯಿ ಆರೋಗ್ಯ ವಿಭಾಗದ ಉಪ ನಿರ್ದೇಶಕ ಡಾ.ರಾಜಕುಮಾರ್ ಮಾತನಾಡಿ, 1ಲಕ್ಷ ಜನನಕ್ಕೆ 69 ಗರ್ಭಿಣಿಯರು ಮರಣ ಹೊಂದುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 100ಕ್ಕೆ 40 ಸಿಸೇರಿಯನ್‌ಗಳಾದರೆ, ಖಾಸಗಿ ಆಸ್ಪತ್ರೆಯಲ್ಲಿ 60ರಿಂದ 70 ಸಿಸೇರಿಯನ್ ಹೆರಿಗೆಯಾಗುತ್ತಿದೆ. ಇದರಲ್ಲಿ ಶೇ.15ರಿಂದ 20 ರಷ್ಟು ಗಂಡಾಂತರ ಹೆರಿಗೆಯಾಗಿರುತ್ತವೆ. ಸೂಕ್ತ ಮುಂಜಾಗ್ರತೆ ಇದ್ದರೆ ಇದನ್ನು ಸಹಜ ಹೆರಿಗೆಯಾಗಿ ಪರಿವರ್ತಿಸಬಹುದು ಎಂದರು.

ಆರೋಗ್ಯ ಇಲಾಖೆ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎಲ್.ರವಿ, ಚಲುವಾಂಬ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮಿಕಾಂತ್, ಆರ್‌ಎಂಎಒ ಶಿವರಾಮಕೃಷ್ಣ, ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net