

ಚೌಳಹಿರಿಯೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು 6.78 ಲಕ್ಷ ರೂ. ಲಾಭದತ್ತ ಕೊಂಡೊಯ್ದಿರುವುದು ಸಾಧನೆ ಎಂದು ಸಂಘದ ಮಾಜಿ ಅಧ್ಯಕ್ಷ ನಂಜುಂಡಶಾಸಿ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, 7 ದಶಕದ ಹಿಂದೆ 50 ರೂ. ಷೇರು ಬಂಡವಾಳದಿಂದ ಪ್ರಾರಂಭವಾದ ಸಂಘ 33 ಲಕ್ಷ ರೂ. ಸಾಲದಲ್ಲಿತ್ತು. ಅದನ್ನು ಈಗ ಲಾಭದತ್ತ ಕೊಂಡೊಯ್ಯಲಾಗಿದೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಕೊಡುಗೆ ಹಿರಿದು ಎಂದರು.
ಸಂಘದ ಅಧ್ಯಕ್ಷ ಆರ್.ಎಂ.ಚಂದ್ರಶೇಖರ್ ಮಾತನಾಡಿ, 2022-23ನೇ ಸಾಲಿನಲ್ಲಿ ಶೇ.99 ಸಾಲ ಮರುಪಾವತಿ ಮಾಡಲಾಗಿದೆ ಎಂದರು.
ಸಂಘದ ಸಿಇಒ ಸಿ.ಡಿ.ಚಿದನಂದಮೂರ್ತಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮಾಜಿ ಅಧ್ಯಕ್ಷರಾದ ಬಿ.ಎಚ್.ಸೋಮಶೇಖರ್, ಗೋವಿಂದಪ್ಪ, ಪ್ರಮುಖರಾದ ಎಂ.ಆರ್.ಮಹೇಶ್ವರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷೆ ನಿರ್ಮಲಾ ಮತ್ತು ನಿರ್ದೇಶಕರು ಇದ್ದರು.