

ನಂಜನಗೂಡು: ತಾಲೂಕಿನ ಹೆಮ್ಮರಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನಲ್ಲಿ 3.80 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪುಟ್ಟರಾಜನಾಯ್ಕ ಹೇಳಿದರು.
ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು 1,180 ಸದಸ್ಯರನ್ನು ಹೊಂದಿದ್ದು, ರೈತರಿಗೆ 3 ಲಕ್ಷ ರೂ.ವರೆಗೂ ಬಡ್ಡಿ ರಹಿತ ಸಾಲ ನೀಡಿ ಕೃಷಿ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೂ ಸಾಲ ವಿತರಿಸುವ ಮೂಲಕ ಲಾಭದಲ್ಲಿ ಸಾಗಿದೆ. ಮುಂದಿನ ವರ್ಷದಿಂದ ಪಶು ಸಂಗೋಪನೆಗೂ ಸಾಲ ವಿತರಿಸಲು ನಿರ್ಧರಿಸಲಾಗಿದೆ. ಈವರೆಗೂ ರೈತರಿಗೆ ನೀಡಲಾಗುತ್ತಿದ್ದ ಸಾಲವನ್ನು 3 ರಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಸಂಘದ ನಿರ್ದೇಶಕ ಹೆಮ್ಮರಗಾಲ ಸೋಮಣ್ಣ ಮಾತನಾಡಿ, ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದಲ್ಲಿ ಸಂಘಕ್ಕೆ ಬ್ಯಾಂಕ್ ಮೂಲಕ ಹೆಚ್ಚುವರಿ ಸಾಲ ದೊರಕಲಿದೆ. ಆದ್ದರಿಂದ ಸದಸ್ಯರು ಸಹಕರಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಪುಟ್ಟಮಾದಯ್ಯ, ನಿರ್ದೇಶಕರಾದ ವೃಷಬೇಂದ್ರಪ್ಪ, ಮೀನಾಕ್ಷಮ್ಮ, ನಾಗರಾಜು, ಕೃಷ್ಣ, ಮಹೇಶ್‌ಕುಮಾರ್, ಶಿವನಾಗೇಗೌಡ, ಮಹದೇವು, ಪುಟ್ಟರಾಜು, ಕಾರ್ಯದರ್ಶಿ ಮುದ್ದುಮಾದಸ್ವಾಮಿ ಉಪಸ್ಥಿತರಿದ್ದರು.