

ಮಾಲೂರು: ತಾಲೂಕಿನಲ್ಲಿ 4 ವರ್ಷ ಆಡಳಿತ ನಡೆಸಿದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಅವರ ಹಿಂಬಾಲಕರು ಮಾಡಿದಾರೆನ್ನಲಾದ ಅಕ್ರಮಗಳ ಬಗ್ಗೆ ವಕೀಲರ ಸಂದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಟಿ.ಬಿ.ಕೃಷ್ಣಪ್ಪ ದಾಖಲೆ ಬಿಡುಗಡೆ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಪ್ಪ, ಜಯಮಂಗಲದಲ್ಲಿ ಇತ್ತೀಚೆಗೆ ಶಾಸಕರ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅದರ ವಿರುದ್ಧ ಕಾಂಗ್ರೆಸ್ ಮುಖಂಡರು ನನ್ನ ಬಗ್ಗೆ, ಪಕ್ಷದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಆರೋಪಗಳನ್ನು ದಾಖಲೆಗಳ ಸಮೇತ ಸಾಬೀತುಪಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದರಿಂದ ಸವಾಲಾಗಿ ಸ್ವೀಕರಿಸಿ ದಾಖಲೆಗಳನ್ನು ಬಿಡುಗಡೆ ಮಾಡಿರುವೆ ಎಂದು ಹೇಳಿದರು.
"ಶಾಸಕ ಕೆ.ವೈ.ನಂಜೇಗೌಡ ಅಕ್ರಮವಾಗಿ ಜೆಲ್ಲಿ ಕ್ರಷರ್ಗಳನ್ನು ಮಾಡಿದ್ದರಿಂದ ಹೈಕೋರ್ಟ್ 106 ಕೋಟಿ ರೂ. ದಂಡ ಪಾವತಿಸಬೇಕು ಎಂದು ಆದೇಶಿಸಿದ್ದರೂ ಇಲ್ಲಿಯವರೆಗೂ ಪಾವತಿಸಿಲ್ಲ. ತಾಲೂಕಿನಲ್ಲಿ 40 ಎಕರೆ ಅರಣ್ಯ ಭೂಮಿ ಧ್ವಂಸ ಮಾಡಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ಮತ್ತೆ ಅರಣ್ಯ ಪ್ರದೇಶದಲ್ಲಿ ಗಿಡಮರಗಳನ್ನು ನೆಡಬೇಕು ಎಂದು ಉಚ್ಚ ನ್ಯಾಯಾಲಯ ಅರಣ್ಯ ಅಧಿಕಾರಿಗಳಿಗೆ ಆದೇಶ ನೀಡಿದೆ.
ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾದ ಕೆ.ವೈ.ನಂಜೇಗೌಡ, 2018&19ನೇ ಸಾಲಿನ 126 ಎಕರೆ ಸರ್ಕಾರಿ ಜಮೀನನ್ನು 4.30 ಎಕರೆ ಜಮೀನು ಇರುವವರಿಗೆ ಮಾತ್ರ ಮಂಜೂರು ಮಾಡಬೇಕು ಎಂದು ಆದೇಶವಿದ್ದರೂ 10 ಎಕರೆಗೂ ಹೆಚ್ಚು ಜಮೀನು ಇದ್ದ ಹಿಂಬಾಲಕರಿಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ 52 ಪ್ರಕರಣಗಳನ್ನು ಕೋಲಾರದ ಸಹಾಯಕ ಕಮಿಷನರ್ ಸೋಮಶೇಖರ್ ವಜಾ ಮಾಡಿ ಜಮೀನು ಮಂಜೂರಾತಿ ವಜಾ ಮಾಡಿದ್ದಾರೆ' ಎಂದು ವಿವರಿಸಿದರು.
"ಮಾಲೂರು ತಾಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾದ ನಂಜೇಗೌಡ, ಬೆಂಗಳೂರು&ಚೆನ್ನೆ$ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಗೆ ಭೂ ಸ್ವಾದಿನ ಪ್ರಕ್ರಿಯೆ ವಿಚಾರಣೆಯನ್ನು ಮೊದಲೇ ತಿಳಿದು, ಪರಿಹಾರ ಪಡೆಯುವ ಉದ್ದೇಶದಿಂದ ರಸ್ತೆಗೆ ಹೋಗುವ ಗೋಮಾಳವನ್ನು ಅನುಯಾಯಿಗಳು, ಕಾರ್ಯಕರ್ತರು, ಸ್ನೇಹಿತರು, ಸಂಬಂಧಿಕರಿಗೆ 2018&19ನೇ ಸಾಲಿನ ಬಗರ್ ಹುಕಂ ಸಾಗುವಳಿ ಸಮಿತಿಯಲ್ಲಿ ಅಕ್ರಮವಾಗಿ ಮಂಜೂರು ಮಾಡಿಸಿದ್ದಾರೆ. ಈ ಬಗ್ಗೆ ಕೋಲಾರದ ಸಹಾಯಕ ಕಮಿಷನರ್ ಪ್ರಕರಣ ದಾಖಲಿಸಿಕೊಂಡು ಅಕ್ರಮ ಮಂಜೂರಾತಿ ವಜಾ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಾಲೂರಿನ ತಹಸೀಲ್ದಾರ್ ಸಹ ಸಸ್ಪೆಂಡ್ ಆಗಿದ್ದಾರೆ' ಎಂದು ದಾಖಲೆಗಳ ಸಮೇತ ಆರೋಪಿಸಿದರು.
ತಾಲೂಕಿನ ಹರದಕೊತ್ತೂರು, ಅಣಿಮಿಟ್ಟನಹಳ್ಳಿ, ಕಣಗಲ ಗ್ರಾಮಗಳಲ್ಲಿ ಕಾನೂನುಬಾಹಿರವಾಗಿ 40 ಎಕರೆ ಸರ್ಕಾರಿ ಬಂಡೆಗೆ ಅಕ್ರಮವಾಗಿ ಗಣಿ ಗುತ್ತಿಗೆ ಪಡೆದಿದ್ದಾರೆ. ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಜಿಪಂ ಸದಸ್ಯರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಜತೆ ಶಾಮೀಲಾಗಿ ಆನೇಪುರದ ಸರ್ವೇ ನಂ.7ರಲ್ಲಿ ದನಕರುಗಳು ನೀರು ಕುಡಿಯಲು ಬಳಸುತ್ತಿದ್ದ ವ್ಯಾಸರಾಯನ ಕೆರೆ ಅಂಗಳಕ್ಕೆ ಸಂಬಂಧಿಸಿದ ಜಮೀನು ಕಬಳಿಸಲು ಅಕ್ರಮ ದಾಖಲೆಗಳನ್ನು ಸೃಷ್ಟಿಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ಎಲ್ಲ ಪ್ರಕರಣಗಳ ಬಗ್ಗೆ ಸರ್ಕಾರದ ಮೂಲಕ ತನಿಖೆಯಾಗಬೇಕು ಎಂದರು.
ನನ್ನ ಮೇಲೆ ಅಕ್ರಮ ಆಸ್ತಿ ಕಬಳಿಕೆ ಕಂಡು ಬಂದರೆ ಸಾಬೀತುಪಡಿಸಲಿ, ಎಷ್ಟೇ ಜನ ಧಮ್ಕಿ ಹಾಕಿದರೂ ನಾನು ಹೆದರುವುದಿಲ್ಲ ಎಂದು ಸವಾಲೆಸೆದರು.
ಜಿಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಪ್ರಜಾ ವೇದಿಕೆ ಅಧ್ಯಕ್ಷ ಮಂಜುನಾಥಗೌಡ, ಮುಖಂಡರಾದ ಅಗ್ರಿ ನಾರಾಯಣಪ್ಪ, ಎಂ.ಪಿ.ಚಂದ್ರಶೇಖರ್, ವಕೀಲರಾದ ನಾರಾಯಣಪ್ಪ, ಶ್ರೀನಿವಾಸ್, ಕಿರಣ್ ಇದ್ದರು.