ಸರ‍್ವಜನಿಕರು ಕಾನೂನು ಕೈಗೆತ್ತಿಕೊಳ್ಳಬೇಡಿ/ಎಸ್ಪಿ ನಾರಾಯಣ

Published on

ವಿಜಯವಾಣಿ ಸುದ್ದಿ ಜಾಲ ಕೋಲಾರ
ಯಾವುದೇ ಪರಿಸ್ಥಿತಿಯಲ್ಲಿ ಸರ‍್ವಜನಿಕರು ಯಾವುದೇ ಕಾರಣಕ್ಕೆ ಕಾನೂನು ಕೈಗೆತ್ತಿಕೊಳ್ಳಬಾರದು. ಪೊಲೀಸರ ಗಮನಕ್ಕೆ ತನ್ನಿ, ನಮ್ಮ ಮೇಲೆ ವಿಶ್ವಾಸವಿಡಿ. ನಾವು ನಿಭಾಯಿಸುತ್ತೇವೆ, ಕಾನೂನು ಉಲ್ಲಂಘಿಸಿದರೆ ನರ‍್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಕೆ ನೀಡಿದರು.

ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ರ‍್ಬರ ಕೊಲೆ ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಸಂಬಂಧ ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಪೊಲೀಸರ ರ‍್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧವೂ ಪ್ರಕರಣ ದಾಖಲಾಗಿದೆ. ನಂಬಿಹಳ್ಳಿ ಗ್ರಾಮದಲ್ಲಿ ಹಾಗೂ ಶ್ರೀನಿವಾಸಪುರ ಪಟ್ಟಣದ ವಲ್ಲಬಾಯಿ ರಸ್ತೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ’ ಎಂದರು.

‘ಸಣ್ಣ ಹೋಟೆಲ್‌ನೊಳಗೆ ನುಗ್ಗಿ ಅವಿತುಕೊಂಡು ಅಡುಗೆ ಅನಿಲ್ ಸಿಲಿಂಡರ್‌ ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಕೊಲೆ ಪ್ರಕರಣದ ಆರೋಪಿ ನಾಗೇಶ್‌ಗೆ ಶರಣಾಗಲು ಸೂಚಿಸಿದೆವು. ಆತ ಕೇಳಲಿಲ್ಲ. ವಿಧಿ ಇಲ್ಲದೆ ಕೋಣೆಯೊಳಗೆ ಆಶ್ರುವಾಯು ಸಿಡಿಸಿದೆವು. ಆಗ ನಮ್ಮ ಸಿಬ್ಬಂದಿ ಸೋಮಶೇಖರ್‌, ಆನಂದ್‌ ಕುಮಾರ್‌, ವೆಂಕಟರಮಣ, ನನ್ನ ಅಂಗರಕ್ಷಕ ಸಿಬ್ಬಂದಿ ನಂಜುಂಡಪ್ಪ, ಎಸ್‌.ಎನ್‌.ಸೋಮಶೇಖರ್‌, ಅಮೀರ್‌ ಅಲಿ ಬಲಬಂತವಾಗಿ ಬಾಗಿಲು ತೆರೆದು ಒಳನುಗ್ಗಿ ಹಿಡಿಯಲು ಮುಂದಾದರು. ಆಗ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಲು ಬಂದ. ಸಿಬ್ಬಂದಿಗೆ ಗಾಯವೂ ಆಯಿತು. ಆಗ ಸ್ವಯಂರಕ್ಷಣೆಗಾಗಿ ಅನ್ಯ ಮರ‍್ಗವಿಲ್ಲದೆ ಎಸ್‌ಎಲ್‌ಆರ್‌ ರೈಫಲ್‌ನಿಂದ ಆರೋಪಿಯ ಕೈ, ಕಾಲಿಗೆ ಐದು ಸುತ್ತು, ೯ ಎಂ.ಎಂ ಪಿಸ್ತೂಲಿನಿಂದ ನಾಲ್ಕು ಸುತ್ತು ಗುಂಡು ಹಾರಿಸಲಾಯಿತು. ಆತ ಕುಸಿದು ಬಿದ್ದ. ಬಂಧಿಸಿ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದೆವು. ಗಾಯಾಳು ನಮ್ಮ ಸಿಬ್ಬಂದಿ ಶ್ರೀನಿವಾಸಪುರ ಆಸ್ಪತ್ರೆ ಹಾಗೂ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೀತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಮಂಗಳವಾರ ಮಧ್ಯಾಹ್ನ ಶ್ರೀನಿವಾಸಪುರ ಪಟ್ಟಣದ ಕುರಿ ವ್ಯಾಪಾರಿ ನಾಗೇಶ್ (೪೩) ಮಚ್ಚಿನಿಂದ ಮೊದಲ ಪತ್ನಿ ರಾಧಾ, ಮಾವ ಮುನಿಯಪ್ಪ, ಪತ್ನಿ ಸಂಬಂಧಿಕರಾದ ವರುಣ್‌ ಹಾಗೂ ಅನುಷಾ ಎಂಬುವರ ಮೇಲೆ ಮಟನ್‌ ಕತ್ತರಿಸಲು ಬಳಸುತ್ತಿದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ. ರಾಧಾ ಸ್ಥಳದಲ್ಲೇ ಮೃತರಾಗಿದ್ದಾರೆ. ಕತ್ತಿಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿರುವ ಮುನಿಯಪ್ಪ ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅನುಷಾ ಅವರಿಗೆ ದವಡೆಗೆ ಗಾಯವಾಗಿದ್ದು, ವರುಣ್‌ ಎಂಬ ಹುಡುಗನ ಕೈ ತುಂಡಾಗಿದೆ’ ಎಂದು ವಿವರಿಸಿದರು.

ಶ್ರೀನಿವಾಸಪುರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ದಯಾನಂದ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ನಾವೂ ಅಲ್ಲಿಗೆ ತೆರಳಿದೆವು. ರೊಚ್ಚಿಗೆದ್ದ ಜನರು ನಾಗೇಶ್‌ನನ್ನು ಹಿಡಿಯಲು ಪ್ರಯತ್ನಿಸಿದರು. ಆತನನ್ನು ಹೊಡೆದು ಸಾಯಿಸಲು ಮುಂದಾದರು. ಆತ ಸಣ್ಣ ಹೋಟೆಲ್‌ಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾನೆ. ಅಲ್ಲಿಗೂ ಬೆಂಕಿ ಹಾಕಲು ಜನರು ಪ್ರಯತ್ನಿಸಿದರು. ಆಗ ನಾಗೇಶ್‌, ಅಡುಗೆ ಅನಿಲ ಸಿಲಿಂಡರ್‌ ತೋರಿಸಿ ತನ್ನನ್ನು ಬಂಧಿಸಲು ಬಂದರೆ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ. ಆಗ ಜನರೂ ಎರಡು ಸಿಲಿಂಡರ್‌ ತಂದು ಸ್ಫೋಟಿಸುವುದಾಗಿ ಹೇಳಿ ಆತಂಕ ಸೃಷ್ಟಿಸಿದರು. ವ್ಯಕ್ತಿಯೊಬ್ಬ ಪೆಟ್ರೋಲ್‌ ಎರಚಿ ಬೆಂಕಿ ಹಾಕಲು ಮುಂದಾದ. ಪೊಲೀಸರು ಆತನನ್ನು ತಡೆದರು. ಜನರ ಆಕ್ರೋಶ ಹೆಚ್ಚುತ್ತಲೇ ಹೋಯಿತು’ ಎಂದು ಹೇಳಿದರು

‘ಮುಳಬಾಗಿಲು ಡಿವೈಎಸ್ಪಿ ಸೇರಿದಂತೆ ಪೊಲೀಸರು ಸರ‍್ವಜನಿಕರಿಗೆ ತಿಳಿ ಹೇಳಿದರೂ ‌ಕೇಳಲಿಲ್ಲ. ನಾನೂ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದೆ. ಮೊದಲ ಬಾರಿ ಎಚ್ಚರಿಕೆ ನೀಡಿದೆವು. ಲಾಠಿ ಪ್ರಹಾರ ಮಾಡಿದರೂ ಸುಮ್ಮನಾಗಲಿಲ್ಲ. ಪರಿಸ್ಥಿತಿ ಹತೋಟಿಗೆ ತರಲು ಟಿಯರ್‌ ಗ್ಯಾಸ್‌ ಸಿಡಿಸಿದೆವು. ಏಳು ಸುತ್ತು ಅಶ್ರುವಾಯು ಸಿಡಿಸಿದರೂ ಕೇಳಲಿಲ್ಲ. ಒಂದು ಸುತ್ತು ರಬ್ಬರ್‌ ಬುಲೆಟ್‌ ಹಾರಿಸಿದೆವು. ಆಗ ವಿಧಿ ಇಲ್ಲದೆ ಎಸ್‌ಎಲ್‌ಆರ್‌ನಿಂದ ಐದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿದೆವು. ಆಗ ಜನರು ಚದುರಿದರು’ ಎಂದರು.

ಘಟನೆ ಹಿನ್ನೆಲೆ: ‘ಆರೋಪಿ ನಾಗೇಶ್‌ಗೆ ೧೫ ರ‍್ಷಗಳ ಹಿಂದೆ ರಾಧಾ ಜೊತೆ ಮದುವೆಯಾಗಿದ್ದು ಒಂದು ಮಗುವಿದೆ. ಆದರೆ, ಈತ ಇನ್ನೊಂದು ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾನೆ. ರಾಧಾ ಹಾಗೂ ಆರೋಪಿ ವಿಚ್ಛೇದನಕ್ಕೆ ರ‍್ಜಿ ಸಲ್ಲಿಸಿದ್ದು, ಪ್ರಕರಣ ನಡೆಯುತ್ತಿದೆ. ರಾಧಾಳಿಗೆ ತಿಂಗಳಿಗೆ ₹ ೮ ಸಾವಿರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದರೂ ಈತ ಹಣ ಕೊಡುತ್ತಿರಲಿಲ್ಲ. ಈ ಹಿಂದೆಯೂ ರಾಧಾ ಹಾಗೂ ಮುನಿಯಪ್ಪ ಮೇಲೆ ಹಲ್ಲೆ ಮಾಡಿದ್ದು, ಪ್ರಕರಣ ದಾಖಲಾಗಿತ್ತು. ಇವರು ತನ್ನ ನೆಮ್ಮದಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮತ್ತೊಮ್ಮೆ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತ ಚೇತರಿಸಿಕೊಂಡ ಮೇಲೆ ತನಿಖೆ ಮುಂದುವರಿಸಲಾಗುವುದು’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net