ಮಳವಳ್ಳಿ: ರೈತರು ಹಾಗೂ ಕಾರ್ಮಿಕರ ಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳ ಮೂಲಕ ನೀಡುತ್ತಿರುವ ವಿವಿಧ ಸವಲತ್ತುಗಳನ್ನು ಫಲಾನುಭವಿಗಳು ಸದ್ವಿನಿಯೋಗ ಪಡೆದುಕೊಳ್ಳುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಮತ್ತು ಕಾರ್ಮಿಕ ಇಲಾಖೆಯಿಂದ ತಾಲೂಕಿನ ಗ್ರಾಮಗಳಿಂದ ಆಯ್ಕೆಯಾಗಿದ್ದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಕಿಟ್ ಹಾಗೂ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು. ಸಾಮಾನ್ಯ ವರ್ಗದವರ ಜೀವನ ಮಟ್ಟ ಸುಧಾರಣೆಗಾಗಿ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಸೌಲಭ್ಯಗಳನ್ನು ನೀಡುತ್ತಿದೆ. ಬಹಳಷ್ಟು ಜನರು ತಮಗೆ ಅವಶ್ಯಕತೆಯಿಲ್ಲದಿದ್ದರೂ ಮಧ್ಯವರ್ತಿಗಳ ಮೂಲಕ ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗಿ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಇಂತಹ ಲೋಪಗಳನ್ನು ಅಧಿಕಾರಿಗಳು ಆಯ್ಕೆ ಸಂದರ್ಭದಲ್ಲಿ ತಡೆಗಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಸ್ತತ ಕೃಷಿ ಇಲಾಖೆಯಿಂದ 133 ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ 66 ಕಿಟ್, ಎಲೆಕ್ಟ್ರಿಕಲ್ ಕೆಲಸ ಮಾಡುವ 55 ಕಾರ್ಮಿಕರಿಗೆ ಬಳಕೆಯಾಗುವ ಕಿಟ್‌ಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ತಾಪಂ ಇಒ ಶ್ರೀನಿವಾಸ್, ಕಾರ್ಮಿಕ ಇಲಾಖೆ ತಾಲೂಕು ಅಧೀಕ್ಷಕಿ ಅನಿತಾ, ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ವಿಶ್ವಾಸ್, ಶಿವಸ್ವಾಮಿ ಇದ್ದರು.