ಸರೋವರ ತಟದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

HUN-AUG-13-2(AMRUTH VASUDHA AT HUSENPURA GP)
ತಾಲೂಕಿನ ಹುಸೇನ್‌ಪುರ ಗ್ರಾ.ಪಂ.ಯ ಅಮೃತ್ ವಸುಧಾ ನಾಮಫಲಕ ಅಳವಡಿಕೆಗೆ ಕಾಮಗಾರಿ ಪ್ರಗತಿಯಲ್ಲಿದೆ.
Published on

ಹುಣಸೂರು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅಮೃತ ಸರೋವರಗಳ ತಟದಲ್ಲಿ ಆ.15ರಂದು ತ್ರಿವರ್ಣ ಧ್ವಜ ಹಾರಾಡಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರ ಯೋಜನೆಯಡಿ ತಾಲೂಕಿನಲ್ಲಿ ಆಯ್ಕೆಗೊಂಡಿರುವ 20 ಅಮೃತ ಸರೋವರಗಳ ಪೈಕಿ 15 ಗ್ರಾ.ಪಂ.ಗಳಲ್ಲಿರುವ ಸರೋವರದಲ್ಲಿ ಸ್ವಾತಂತ್ರ್ಯ ದಿನದಂದು ತಿರಂಗ ಧ್ವಜ ಹಾರಾಡಲಿದೆ. ಅಲ್ಲದೆ ಈ ಬಾರಿ ಎಲ್ಲ ಗ್ರಾ.ಪಂ.ಗಳಲ್ಲಿ ಅಮೃತ ವಸುಧಾ, ಅಮೃತ್ ವಾಟಿಕ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಮನು ವಿಜಯವಾಣಿಗೆ ಮಾಹಿತಿ ನೀಡಿದರು.

ಈ ಬಾರಿ ಸರೋವರದ ತಟದಲ್ಲಿ ತ್ರಿವರ್ಣ ಧ್ವಜ ಹಾರುವುದರೊಂದಿಗೆ ಅಮೃತ ವಸುಧಾ ಯೋಜನೆಯಡಿ ದೇಶದ ರಕ್ಷಣೆಗಾಗಿ ವೀರ ಮರಣಕ್ಕೀಡಾದ ಯೋಧರಿಗೆ ನಮನ ಸಲ್ಲಿಸಲು ಎಲ್ಲ 41 ಗ್ರಾ.ಪಂ.ಗಳಲ್ಲೂ ಶಿಲಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ನಮ್ಮ ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ಯೋಧರಿಗೆ ಗೌರವ ನಮನಗಳನ್ನು ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ನೆರವಿನೊಂದಿಗೆ ವಿವಿಧ ಚಟುವಟಿಕೆಗಳನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪಂಚಾಯಿತಿ ವತಿಯಿಂದ ಪ್ರಮುಖ ಬೀದಿಗಳಲ್ಲಿ ತಿರಂಗಯಾತ್ರೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸ್ಥಳೀಯ ಪ್ರೌಢಶಾಲಾ ಮಕ್ಕಳಿಗೆ ಕೆರೆ ಮಹತ್ವ ಹಾಗೂ ದೇಶ ಭಕ್ತಿ ಕುರಿತು ಚಿತ್ರಕಲೆ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲಿದ್ದು, ಸ್ಥಳದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಅಮೃತ ವಾಟಿಕ ಹೆಸರಿನಡಿ ಅರಣ್ಯ ಇಲಾಖೆಯಿಂದ 75 ಸಸಿಗಳನ್ನು ಪಡೆದು ಈಗಾಗಲೇ ಆಯ್ದ ಪ್ರದೇಶದಲ್ಲಿ ನೆಡಲಾಗುತ್ತಿದ್ದು, ಆ ಮೂಲಕ ಗ್ರಾಮದ ಜನರಿಗೆ ಹಾಗೂ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪರಿಸರದ ಮೌಲ್ಯವನ್ನು ತಿಳಿಸುವ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net