ಸಮಯಕ್ಕೆ ಬಸ್ ಬಾರದೆ ವಿದ್ಯಾರ್ಥಿಗಳಿಗೆ ಕ್ಲಾಸ್ ಮಿಸ್

11bhr 1 bus
ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ತರಗತಿಗಳಿಂದ ಹೊರಗುಳಿದ ಬಾಳೆಹೊನ್ನೂರು ಬಿಜಿಎಸ್ ವಿಜ್ಞಾನ, ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು.
Published on

ಬಾಳೆಹೊನ್ನೂರು: ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಬರದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯವೂ ತರಗತಿಗಳಿಗೆ ತೊಂದರೆ ಆಗುತ್ತಿದೆ ಎಂದು ಪಟ್ಟಣದ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ದೂರಿದ್ದಾರೆ. ಚಿಕ್ಕಮಗಳೂರಿನಿಂದ ಶೃಂಗೇರಿ, ಕೊಪ್ಪ ಮಾರ್ಗವಾಗಿ ಹಾಗೂ ಶೃಂಗೇರಿಯಿಂದ ಚಿಕ್ಕಮಗಳೂರು ಮಾರ್ಗವಾಗಿ ನಿತ್ಯವೂ ಹಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲು ಅನುಮತಿಯಿದ್ದರೂ ನಿಗದಿತ ಸಮಯಕ್ಕೆ ಬಾರದೆ ವಿದ್ಯಾರ್ಥಿಗಳಿಗೆ ನಿತ್ಯವೂ ತೊಂದರೆಯಾಗುತ್ತಿದೆ.

ಚಿಕ್ಕಮಗಳೂರು ಕಡೆಯಿಂದ ಕಡಬಗೆರೆ, ಸಂಗಮೇಶ್ವರಪೇಟೆ, ಜೇನುಗದ್ದೆ, ಹುಣಸೇಹಳ್ಳಿ, ಶೃಂಗೇರಿ ಕಡೆಯಿಂದ ಜಯಪುರ, ಶಾಂತಿಪುರ, ಎಲೆಮಡಲು, ಹೇರೂರು, ಸೀಗೋಡು ಮುಂತಾದ ಕಡೆಗಳಿಂದ ಬಾಳೆಹೊನ್ನೂರು ಭಾಗಕ್ಕೆ ನಿತ್ಯವೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ನಿತ್ಯವೂ ಹಲವು ಮಾರ್ಗದ ಬಸ್‌ಗಳು ಶಾಲಾ ಕಾಲೇಜು ಸಮಯಕ್ಕೆ ಬಾರದೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಹಾಜರಾತಿಯೂ ಕೊರತೆಯಾಗುತ್ತಿದೆ.

ಸಮಯಕ್ಕೆ ಸರಿಯಾಗಿ ಬಾರದ ಹಲವು ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡದೆ ನಿರಾಕರಿಸಿದ್ದಾರೆ. ಇದರಿಂದಾಗಿ ಬೇಸತ್ತ ವಿದ್ಯಾರ್ಥಿಗಳು ಶೀಘ್ರ ಕಾಲೇಜಿನ ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿ ಸುಧನ್ವ ಮಾತನಾಡಿ, ನಾನು ನಿತ್ಯವೂ ಕಡಬಗೆರೆಯಿಂದ ಪಟ್ಟಣದ ಬಿಜಿಎಸ್ ಕಾಲೇಜಿಗೆ ಬರುತ್ತಿದ್ದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲಿ ಕಾಯುವಂತಾಗಿದೆ. ಹಲವು ಬಸ್‌ಗಳನ್ನು ಕಾಲೇಜು ಬಳಿ ನಿಲುಗಡೆ ಮಾಡುತ್ತಿಲ್ಲ. ಹಲವು ದಿನಗಳಿಂದ ತರಗತಿಗಳು ಮಿಸ್ ಆಗುತ್ತಿವೆ. ಸಂಬಂಧಿಸಿದವರು ಗಮನಹರಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿನಿ ಸಂಜನಾ ಮಾತನಾಡಿ, ಕಾಲೇಜು ಬಳಿ ನಿಲುಗಡೆಗೆ ಅನುಮತಿಯಿದ್ದರೂ ನಿಲ್ಲಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ತರಗತಿಗೆ ಬರದ ಕಾರಣ ಪ್ರಾಧ್ಯಾಪಕರು ತರಗತಿಯಿಂದ ಹೊರ ಹಾಕುತ್ತಿದ್ದಾರೆ. ಪರೀಕ್ಷೆಗಳಿಗೆ ಇದರಿಂದಾಗಿ ತೊಂದರೆಯಾಗುತ್ತಿದೆ ಎಂದರು.

ವಿದ್ಯಾರ್ಥಿ ವಿನೀತ್ ಮಾತನಾಡಿ, ಬಸ್‌ಗಳ ಸಮಸ್ಯೆಯಿಂದಾಗಿ ಪರೀಕ್ಷೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವು ಬಾರಿ ಈ ಕುರಿತು ಸಂಬಂಧಿಸಿದವರಿಗೆ ಗಮನಸೆಳೆದರೂ ಸಮಸ್ಯೆ ಬಗೆಹರಿಸಿಲ್ಲ. ಇದರಿಂದ ಶೀಘ್ರದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net