

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ನಿರತ 46ನೇ ತಂಡದ ಸುಮಾರು 328 ಸಬ್‌ಇನ್‌ಸ್ಪೆಕ್ಟರ್ ಪ್ರಶಿಕ್ಷಣಾರ್ಥಿಗಳು ಭಾನುವಾರ ನಗರದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛ ಮಾಡುವ ಶ್ರಮದಾನ ನಡೆಸಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಶ್ರಮದಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪೊಲೀಸ್ ಎಂಬುದು ಶಿಸ್ತಿನ ಇಲಾಖೆಯಾಗಿದ್ದು, ಕಾನೂನು ಸುವ್ಯವಸ್ಥೆ ಜಾರಿ ಮಾಡುವ ಜವಾಬ್ದಾರಿ ಹೊಂದಿದೆ. ಇಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿ ಶ್ರಮದಾನದ ಮೂಲಕ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸೋಣ ಎಂದರು.
ಕೆಪಿಎ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ಮಾತನಾಡಿ, ಪೊಲೀಸರಾದ ನಾವು ನಮ್ಮ ಕರ್ತವ್ಯದೊಂದಿಗೆ ಸಾಮಾಜಿಕ ಕಳಕಳಿ ಹೊಂದಿರಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಿಸಲು ಕಟಿಬದ್ಧರಾಗಿ ನಿಲ್ಲಬೇಕು, ಬದ್ಧತೆ ಹೊಂದಬೇಕು. ಉತ್ತಮ ಸಮಾಜ ನಿರ್ಮಾಣದಿಂದ ಎಲ್ಲ ಆಯಾಮಗಳಲ್ಲೂ ಮಾದರಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಕೆಪಿಎ ಸಾಮಾಜಿಕ ಸೇವಾ ಕ್ಲಬ್‌ನ ಸಂಯೋಜಕ ಎಸ್.ಎನ್.ಸಂದೇಶಕುಮಾರ್ ಮಾತನಾಡಿ, ಮೈಕ್ರೋ ಪ್ಲಾಸ್ಟಿಕ್ ಹಾಗೂ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್ ಪರಿಸರ ಹಾಗೂ ಮನುಕುಲಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸುವ ಅಗತ್ಯದ ಬಗ್ಗೆ ತಿಳಿಸಿದರು.
ಸಹಾಯಕ ನಿರ್ದೇಶಕರಾದ ರೇಣುಕಾರಾಧ್ಯ, ಸುದರ್ಶನ್, ವೆಂಕಟೇಶ್, ಇತರೆ ಅಧಿಕಾರಿಗಳು ಹಾಗೂ ಬೋಧಕರಾದ ಚಂದ್ರಶೇಖರ್, ಕ್ರಾಂತಿರಾಜ್ ಒಡೆಯರ್, ವೈದ್ಯರಾದ ಕರುಣಾಕರ್, ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು. ಪ್ರಶಿಕ್ಷಣಾರ್ಥಿಗಳು ಕುಕ್ಕರಹಳ್ಳಿ ಯಲ್ಲಿ ಸಂಗ್ರಹಿಸಿದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಮಾಡಿದ್ದರು.