ಸನಾತನ ಧರ್ಮ ಉಳಿವಿಗೆ ಆರ್ಯವೈಶ್ಯರ ಶ್ರಮ

31
Published on

ಇಂದು ಸನಾತನ ಧರ್ಮ ಉಳಿವಿಗೆ, ಬೆಳವಣಿಗೆಗೆ ಆರ್ಯವೈಶ್ಯ ಸಮಾಜ ಶ್ರಮಿಸುತ್ತಿದ್ದು, ಪ್ರತಿ ವರ್ಷ 25 ಕೋಟಿ ರೂ. ಗಳನ್ನು ವ್ಯಯ ಮಾಡಲಾಗುತ್ತಿದೆ. ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಾಗೂ ಅಖಿಲ ಭಾರತ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ತಿಳಿಸಿದರು.

ನಗರದ ವಿಶ್ವೇಶ್ವರನಗರದ ಮೈಸೂರು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಆಡಿಟೋರಿಯಂನಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮೈಸೂರು-ಮಂಡ್ಯ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಾವು ಮುಂದಿನ ಪೀಳಿಗೆಗೆ ಸಧೃಡವಾದ ಬುನಾದಿ ಹಾಕಿಕೊಡಬೇಕಿದೆ. ಬೇರೆಯೊಬ್ಬರನ್ನು ನೋಡಿ ಕಲಿಯುವ ಬದಲಾಗಿ ನಮ್ಮೊಳಗಿನ ಒಗ್ಗಟ್ಟು, ಚಿಂತನೆಗಳನ್ನು ಬಲಗೊಳಿಸಬೇಕಿದೆ. ಇದರ ಭಾಗವಾಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಕಾರ್ಯ ನಿರ್ವಹಿಸುವ ಅಗತ್ಯವಿದೆ. ಸಮಾಜದ ವಿಶ್ವಾಸವನ್ನು ಕಾಪಾಡುವ, ಗಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಪ್ರಸ್ತುತ 82 ಸಹಕಾರ ಸಂಘಗಳು, 9 ಕೋ-ಆಪರೇಟಿವ್ ಬ್ಯಾಂಕ್‌ಗಳಿದ್ದು, 1 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿದೆ. ಸಮಾಜದಲ್ಲಿ ಆರ್ಥಿಕವಾಗಿ ಸಮುದಾಯ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಇದರಿಂದ ಸಮಸ್ತ ನಾಗರೀಕ ಸಮಾಜಕ್ಕೆ ಸೇವೆ ನೀಡುತ್ತಿದೆ. ರಾಜ್ಯದ ಶೇ 0.76 (5ಲಕ್ಷ)ರಷ್ಟು ಸಮುದಾಯದ ಒಟ್ಟು ಜನಸಂಖ್ಯೆಯಿದೆ. ಇದೆಲ್ಲವನ್ನು ನಾವು ಅರಿತು ಸಮುದಾಯವನ್ನು ಮೇಲೆತ್ತಲು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಹೇಳಿದರು.

ನಿರ್ದೇಶಕ ಅನಿಲ್ ಕುಮಾರ್ ತಲ್ಲಂ ಮಾತನಾಡಿ, ರಾಜ ಮಹಾರಾಜರ ಕಾಲದಿಂದಲೂ ವ್ಯಾಪಾರ, ವ್ಯವಹಾರಕ್ಕೆ ಪ್ರಖ್ಯಾತಿ ಗಳಿಸಿದ್ದ ಆರ್ಯ ವೈಶ್ಯ ಸಮುದಾಯ ಹಿಂದು ಸಮಾಜದಲ್ಲಿರುವ ನಾಲ್ಕು ವರ್ಣಗಳಲ್ಲಿ ಪ್ರತಿನಿಧಿಸುತ್ತಿದೆ. ನಮ್ಮ ಕುಲಕಸಬು ವ್ಯಾಪಾರವಾಗಿದೆ. ಆದರೆ ಇಂದು ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದು, ನೈತಿಕತೆ ಇಲ್ಲದೆ ಮೋಸ ಮಿತಿಮೀರಿದೆ. ಇದರಿಂದ ಆರ್ಯವೈಶ್ಯ ಸಮುದಾಯ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ವಿ.ರಾಮ್‌ಪ್ರಸಾದ್, ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಆನಂದ ಕೃಷ್ಣ, ಮೈಸೂರು-ಮಂಡ್ಯ ಜಿಲ್ಲಾ ಸಮಾವೇಶ ಅಧ್ಯಕ್ಷ ಎಂ.ಎಸ್. ರಾಮಚಂದ್ರ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಾರ್ಯದರ್ಶಿ ಕೆ.ಆರ್. ಕೃಷ್ಣ, ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ್, ಮಂಡ್ಯ ಜಿಲ್ಲಾ ಸಮಿತಿ ಅದ್ಯಕ್ಷ ಎನ್.ಎನ್. ನಾರಾಯಣಸ್ವಾಮಿ, ಅಖಿಲ ಕರ್ನಾಟಕ ವಾಸವಿ ದೇವಸ್ಥಾನಗಳ ಒಕ್ಕೂಟ ಮೈಸೂರು ವಿಭಾಗೀಯ ನಿರ್ದೇಶಕ ಎಂ.ಎಸ್ ನಾಗರಾಜುಗುಪ್ತ, ವಾಸವಿ ಯುವಜನ ಸಂಘ ಅಧ್ಯಕ್ಷ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net