

ಚಿತ್ರದುರ್ಗ: ಸತ್ಯ, ಶುದ್ಧ ಕಾಯಕಕ್ಕೆ ಒಕ್ಕಲಿಗ ಮುದ್ದಣ್ಣ ಹೆಸರುವಾಸಿ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ಬಣ್ಣಿಸಿದರು.
ಶ್ರೀಮಠದ ಮುರಿಗೆ ಶಾಂತವೀರ ಶ್ರೀ ಲೀಲಾ ವಿಶ್ರಾಂತಿ ತಾಣ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಒಕ್ಕಲಿಗ ಮುದ್ದಣ್ಣ ಅವರ ಜಯಂತಿಯಲ್ಲಿ ಮಾತನಾಡಿದರು.
ಮಣ್ಣನ್ನು ಚಿನ್ನವಾಗಿಸಿಕೊಂಡು ಬದುಕು ಕಟ್ಟಿಕೊಂಡ ಮುದ್ದಣ್ಣ ವಿದ್ಯಾವಂತರಲ್ಲ. ಏಕೆ?, ಹೇಗೆ ಜೀವಿಸಬೇಕೆಂಬ ಸತ್ಯ ಅರಿತು, ಆನಂದಿಸಿದಲ್ಲದೆ, ನಮಗೆಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದು ಸ್ಮರಿಸಿದರು.
ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತ, ಜಂಗಮ ದಾಸೋಹ ನಡೆಸುವುದು ಮುದ್ದಣ್ಣನವರ ನಿತ್ಯ ವ್ರತವಾಗಿತ್ತು. ರಾಜರಿಗೆ ತೆರಿಗೆ ನೀಡದೆ, ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸುತ್ತಿದ್ದ ಮಹಾವ್ಯಕ್ತಿ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಮುಖ್ಯಸ್ಥ ಜಿ.ಟಿ.ನಂದೀಶ್ ಮಾತನಾಡಿ, ಮುದ್ದಣ್ಣ ವೇದ, ಶಾಸ್ತ್ರ ಬಲ್ಲವರಲ್ಲ. ವ್ಯವಸಾಯ ವೃತ್ತಿಯೊಂದೇ ತಿಳಿದಿದೆ ಎನ್ನುವ ಮೂಲಕ ಬದುಕಿಗೆ ಆಧಾರವಾದ ಕೃಷಿ ಜತೆಗೆ ಆಧ್ಯಾತ್ಮಿಕ ಕಾಯಕದೊಂದಿಗೆ ಬಸವಾದಿ ಶಿವಶರಣರ ಸಂಕುಲದಲ್ಲಿ ತಮ್ಮ ಇರುವಿಕೆಗೆ ಸಾಕ್ಷಿಯಾದ ಮಹನೀಯ ಎಂದು ಬಣ್ಣಿಸಿದರು.
ನಿಪ್ಪಾಣಿ ಬಸವಕೇಂದ್ರದ ಮಲ್ಲಿಕಾರ್ಜುನ ಶ್ರೀ, ಮಹಾಸಭಾದ ಬಸವರಾಜ ಕಟ್ಟಿ, ಜೆ.ಎಸ್.ಮುರುಗೇಶ್, ಪ್ರಾಧ್ಯಾಪಕರಾದ ಡಾ.ಆನಂದ್, ನವೀನ್ ಮಸ್ಕಲ್, ನಾಗಲಾಂಬಿಕಾ, ಎಸ್‌ಜೆಎಂ ಕನ್ನಡ ಶಾಲೆಯ ಮುಖ್ಯಶಿಕ್ಷಕ ವೀರಭದ್ರಪ್ಪ, ನಿವೃತ್ತ ಪ್ರಾಚಾರ್ಯ ಟಿ.ಪಿ.ಜ್ಞಾನಮೂರ್ತಿ, ಶಿಕ್ಷಕರಾದ ಟಿ.ನಾಗರಾಜ್, ಎಂ.ಶಿವಮೂರ್ತಯ್ಯ, ಗಿರೀಶ್ ಇತರರಿದ್ದರು.