ಸತ್ಕಾರ್ಯದಿಂದ ಪುಣ್ಯ ಪ್ರಾಪ್ತಿ

swamiji (2)
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ
Published on

ಸಾಗರ: ಒಂದು ಕುಟುಂಬದ ಯಾರೇ ಒಬ್ಬ ಸದಸ್ಯ ತಪ್ಪು ಮಾಡಿದರೆ ಅದರ ದೋಷದ ಪಾಲು ಇಡೀ ಕುಟುಂಬಕ್ಕೆ ಬರಲಿದೆ. ಅಂತೆಯೇ ಕುಟುಂಬದ ಯಾರೇ ಒಬ್ಬ ಪುಣ್ಯದ ಕೆಲಸ ಮಾಡಿದರೂ ಅದು ಕೂಡ ಇಡೀ ಕುಟುಂಬಕ್ಕೆ ದೊರೆಯಲಿದೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸಾಗರ ತಾಲೂಕಿನ ಮಂಚಾಲೆ ಕಾನಗೋಡಲ್ಲಿ ಗುರುವಾರ ಏರ್ಪಡಿಸಿದ್ದ ಗುರುಪಾದುಕಾ ಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಯಾರೂ ತಪ್ಪು ಮಾಡದ ರೀತಿ ಸಂಸ್ಕಾರ ನೀಡುವುದು ನಮ್ಮ ನಮ್ಮ ಕುಟುಂಬದ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಕುಟುಂಬ ಎನ್ನುವುದು ಸಮಷ್ಟಿ. ತಪ್ಪು ಮಾಡಿದ ವ್ಯಕ್ತಿಗೆ ಅಶುಭದ ಫಲ ಹೆಚ್ಚಿರಬಹುದು. ಆದರೆ ಉಳಿದವರಿಗೆ ಅದು ಇಲ್ಲ ಎನ್ನುವುದಿಲ್ಲ. ಎಲ್ಲರೂ ಸ್ವಲ್ಪವಾದರೂ ಅದನ್ನು ಅನುಭವಿಸಲೇಬೇಕು. ಪುಣ್ಯ ಕಾರ್ಯದಲ್ಲೂ ಅದನ್ನು ಮಾಡಿದವನಿಗೆ ಹೆಚ್ಚು ಫಲದೊರೆಯಬಹುದು. ಉಳಿದಂತೆ ಎಲ್ಲರಿಗೂ ಫಲ ಸಿಗಲಿದೆ. ಹಾಗಾಗಿ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.

ಸೇವೆ ಮಾಡುವ ಭಾಗ್ಯವನ್ನು ಎಲ್ಲ ಸಂದರ್ಭದಲ್ಲಿಯೂ ಭಗವಂತ ಒದಗಿಸುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ. ಅನೇಕ ಸಂದರ್ಭದಲ್ಲಿ ರಾಮನ ಮುಂದೆ ಸೇವೆಗಾಗಿ ನಿಂತ ಭರತ, ಗುಹ, ಸುಗ್ರೀವ, ವಿಭೀಷಣ ಅವಕಾಶಕ್ಕೆ ಕಾದರೂ ಸಿಕ್ಕಿರಲಿಲ್ಲ. ಸೇವೆಯನ್ನು ಸುಲಭವಾಗಿ ಸ್ವೀಕರಿಸದ ಭಗವಂತ ರಾಮ ಎಂದರು.

ನಾಗಮ್ಮ ಮಂಜಪ್ಪ ಕುಟುಂಬದಿಂದ ಗುರುಪಾದುಕಾ ಸೇವೆ ನಡೆಯಿತು. ರಮೇಶ್ ಕಾನಗೋಡು, ರಾಘವೇಂದ್ರ ಮಧ್ಯಸ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net