ಸಂತೆ ಕಟ್ಟೆ ಇಲ್ಲದೆ ರಸ್ತೆಬದಿಯೇ ವ್ಯಾಪಾರ

ald santhe
ಮಳೆಯಲ್ಲೇ ಕುಳಿತು ಸೊಪ್ಪು ಮಾರಾಟ ಮಾಡುತ್ತಿರುವ ಮಹಿಳೆ.
Published on

ಆಲ್ದೂರು: ಪಟ್ಟಣದಲ್ಲಿ ಶನಿವಾರ ನಡೆಯುವ ಸಂತೆ ಹಲವು ಮೂಲ ಸೌಲಭ್ಯಗಳಿಲ್ಲದೆ ವಂಚಿತವಾಗಿದೆ.
ಸಂತೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಅಗತ್ಯ ವಸ್ತುಗಳ ಖರೀದಿಗೆ ಆಗಮಿಸುತ್ತಾರೆ. ಸಂತೆಯಲ್ಲಿ ತರಕಾರಿ ಹಾಕಿಕೊಳ್ಳಲು ಕಟ್ಟೆಗಳ ಸಂಖ್ಯೆ ಕಡಿಮೆ ಇರುವುದರಿಂದ ಸಾಕಷ್ಟು ವ್ಯಾಪಾರಿಗಳು ಸಂತೆಗೆ ಸಾಗುವ ರಸ್ತೆ ಬದಿಯಲ್ಲೇ ಅಂಗಡಿಗಳನ್ನು ಹಾಕಿಕೊಳ್ಳುತ್ತಿರುವುದರಿಂದ ವಾಹನ ದಟ್ಟಣೆಯಾಗಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಸಂತೆಗೆ ಬರುವ ಜನ ತೊಂದರೆ ಅನುಭವಿಸುವಂತಾಗಿದೆ. ಸಂತೆ ನಡೆಯುವ ಜಾಗ 4 ಎಕರೆಯಷ್ಟಿದ್ದು ಆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಮೀನು ಮಾರಾಟಕ್ಕೆ ಪ್ರತ್ಯೇಕ ಕಟ್ಟೆಗಳ ವ್ಯವಸ್ಥೆಗಳಿಲ್ಲದ ಕಾರಣ ಅಕ್ಕಪಕ್ಕದಲ್ಲೇ ತರಕಾರಿ ಮತ್ತು ಮೀನಿನ ಅಂಗಡಿಗಳನ್ನು ಹಾಕಿಕೊಂಡಿರುತ್ತಾರೆ. ಈ ರಸ್ತೆಯ ಪಕ್ಕದಲ್ಲೇ ಕೋಳಿ ಮಾಂಸದ ಮಳಿಗೆಗಳನ್ನು ಪಂಚಾಯಿತಿಯಿಂದ ಟೆಂಡರ್ ನೀಡಿದ್ದು ಕೋಳಿ ಅಂಗಡಿ, ಮೀನು ಹಾಗೂ ಹಂದಿ ಮಾಂಸದ ಅಂಗಡಿಗಳಿಂದ ದುರ್ನಾತ ಬೀರುತ್ತಿದೆ. ತರಕಾರಿ ಖರೀದಿಗೆ ಬರುವ ಗ್ರಾಹಕರು ಈ ಅಂಗಡಿಗಳ ಮಧ್ಯೆ ಹಾದು ಹೋಗಬೇಕಿದ್ದು ಗ್ರಾಹಕರು ಮೂಗು ಮುಚ್ಚಿಕೊಂಡು ತರಕಾರಿ ಖರೀದಿ ಮಾಡಬೇಕಿದೆ.
ಸಂತೆ ಮಾರುಕಟ್ಟೆಯಲ್ಲಿ ಶೌಚಗೃಹ ನಿರ್ಮಿಸಿ 2 ವರ್ಷಗಳಾಗಿದ್ದು ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕಾಮಗಾರಿ ಕಳಪೆಯಾಗಿದೆ ಎಂದು ಶೌಚಗೃಹ ಉದ್ಘಾಟನೆ ಮಾಡಲು ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು ಹೀಗಾಗಿ ಉದ್ಘಾಟನೆಯಾಗದೆ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net