

ಸಮುದಾಯಗಳ ವಿಚಾರದಲ್ಲಿ ಚುನಾವಣಾ ರಾಜಕಾರಣ ಮಾಡದೇ ಸಣ್ಣ ಸಮುದಾಯಗಳನ್ನು ಮೇಲಕ್ಕೆ ಎತ್ತುವ ಪ್ರಯತ್ನಕ್ಕೆ ರಾಜಕಾರಣಿಗಳು ಮುಂದಾಗಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ಜಿಲ್ಲಾ ಗಾಣಿಗರ ಸಂಘದ ವತಿಯಿಂದ ನಗರದ ದೇವರಾಜ ಮೊಹಲ್ಲಾದ ಬಳಿ ಇರುವ ಯಾದವ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅತಿ ಹೆಚ್ಚು ಅಂಕ ಗಳಿಸಿದ ಎಸ್‌ಎಸ್‌ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಎಲ್ಲ ಸಣ್ಣ ಸಮಾಜಗಳು ಒಗ್ಗಟ್ಟಾದರೆ ಮಾತ್ರ ರಾಜಕೀಯ ಅಧಿಕಾರ ದೊರಕುತ್ತದೆ. ಇಲ್ಲವಾದರೆ ಸಣ್ಣ ಸಮುದಾಯಗಳು ಎಲ್ಲ ಅವಕಾಶಗಳಿಂದ ವಂಚಿತರಾಗುತ್ತವೆ ಎಂದರು.
ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿ ಇದೆ. ಆದ್ದರಿಂದ ವಿದ್ಯಾರ್ಥಿಗಳು ಸಲ್ಲದ ವಿಚಾರಗಳ ಬಗ್ಗೆ ಆಸಕ್ತಿ ತೋರದೆ. ವಿದ್ಯಾಭ್ಯಾಸದ ಕಡೆ ಗಮನಕೊಡಬೇಕು. ತಂದೆ-ತಾಯಿಗಳಿಗೆ ಗೌರವ ಕೊಡಬೇಕು. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಕವಿ ಮಾತು ಹೇಳಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಿದರು. ಮಾಜಿ ಮೇಯರ್ ಅನಂತು, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎನ್.ಸಿ.ಉಮೇಶ್, ಜಿಲ್ಲಾ ಸಹಕಾರ ನೌಕರರ ಸಂಘದ ಅಧ್ಯಕ್ಷ ಡಾ.ಅರುಣ್ ಕುಮಾರ್, ಡಿ.ಗ್ರೂಪ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿ.ವೆಂಕಟೇಶ್, ಡಾ.ಎಸ್.ಯೋಗೇಶ್ ಇದ್ದರು.