ಸಕ್ಕರೆ ಕಾರ್ಖಾನೆ ಕಚೇರಿ ಬೀಗ ಜಡಿದು ಪ್ರತಿಭಟನೆ

27tnp01
Published on

ತಿ.ನರಸೀಪುರ: ಸರ್ಕಾರ ನಿಗದಿಪಡಿಸಿದ ಹೆಚ್ಚುವರಿ ಬಾಕಿ ಕಬ್ಬಿನ ಹಣ ನೀಡದಿರುವುದನ್ನು ವಿರೋಧಿಸಿ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಉಪ ಕಚೇರಿಗೆ ಗುರುವಾರ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಬೀಗ ಜಡಿದು ಪ್ರತಿಭಟನೆ ನಡೆಸಿದರು.


ಕುರುಬೂರು ಸಿದೇಶ್ ಮಾತನಾಡಿ, ಕಳೆದ ವರ್ಷ ಜನವರಿಯಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘ 39 ದಿನಗಳ ಹೋರಾಟ ಮಾಡಿದ ಫಲವಾಗಿ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 150 ರೂ. ಘೋಷಿಸಿ ಆದೇಶ ಮಾಡಿತ್ತು.
ಸರ್ಕಾರ ನಿಗದಿಪಡಿಸಿದ ಹೆಚ್ಚುವರಿ ಬಾಕಿ ಹಣವನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆ ಇದುವರೆಗೂ ಕಬ್ಬು ಸರಬರಾಜು ಮಾಡಿದ ರೈತರಿಗೆ ನೀಡದೆ ಕಬ್ಬು ಬೆಳೆದ ರೈತರಿಗೆ ಅನ್ಯಾಯ ಮಾಡುತ್ತಿದೆ. ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕೋರ್ಟ್ ಮೂಲಕ ತಡೆಯಾಜ್ಞೆ ತರುವುದರ ಮೂಲಕ ರೈತರನ್ನು ವಂಚಿಸುತ್ತಿದೆ. ಎರಡು ದಿನದ ಹಿಂದೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರ ಸಭೆಯನ್ನು ಏರ್ಪಡಿಸಲಾಗಿತ್ತು.


ಆ ಸಭೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ವೇಲುಸ್ವಾಮಿ, ಕಬ್ಬಿನ ಬಾಕಿ ಹಣ ಕೊಡುವ ವಿಷಯ ಕೋರ್ಟ್‌ನಲ್ಲಿ ಕೇಸ್ ಇರುವುದರಿಂದ ರೈತರಿಗೆ ಬಾಕಿ ಹಣ ಕೊಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದರು. ಅದಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿ ಕಳೆದ ವರ್ಷದ ಬಾಕಿ 150 ರೂ.ನೀಡುವ ತನಕ ಕಾರ್ಖಾನೆಯನ್ನು ಪ್ರಾರಂಭಿಸಬಾರದು ಎಂದು ತಿಳಿಸಿದ್ದರು.


ಮೈಸೂರು ಜಿಲ್ಲೆಯಾದ್ಯಂತ ಸಕ್ಕರೆ ಕಾರ್ಖಾನೆ ಉಪ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬಾಕಿ ಹಣ ನೀಡುವ ತನಕ ಕಚೇರಿಯ ಬಾಗಿಲು ತೆರೆಯಬಾರದು ಎಂದು ಎಚ್ಚರಿಕೆ ನೀಡಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಸಿದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಟೌನ್ ಅಧ್ಯಕ್ಷ ಅಪ್ಪಣ್ಣ, ಅದಿಬೆಟ್ಟಳ್ಳಿ ನಂಜುಂಡಸ್ವಾಮಿ, ಹಾಕ್ಯನೂರು ರಾಜೇಶ್, ಬಿ.ಪಿ.ಪರಶಿವಮೂರ್ತಿ, ಯೋಗೇಶ್, ಉಮೇಶ, ಕೆ.ಜಿ.ಗುರುಸ್ವಾಮಿ, ನಾಗೇಂದ್ರ, ಲಿಂಗರಾಜ್, ಮಹೇಶ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net