

ಶೃಂಗೇರಿ: ಸಂಸ್ಕೃತ ಸಾಹಿತ್ಯದಲ್ಲಿ ವರ್ಣಿಸಿರುವ ಜೀವನಕ್ರಮವನ್ನು ಅನುಸರಿಸಿದರೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಶ್ರೀಮಠದ ಆಸ್ಥಾನ ವಿದ್ವಾಂಸ ನಾಗರಾಜ ಭಟ್ ತಿಳಿಸಿದರು.
ಶ್ರೀಮಠದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದಿಂದ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೀತೆಯಲ್ಲಿ ಯುಕ್ತಾಹಾರವಿಹಾರಸ್ಯ ಎಂಬ ಶ್ಲೋಕದಲ್ಲಿ ಹೇಳಿರುವ ಪ್ರತಿ ಅಂಶವೂ ವಿದ್ಯಾರ್ಥಿಗಳಿಗೆ ಅನುಕರಣೀಯವಾಗಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಬಾರದು. ಮಿತವಾದ ಆಹಾರ ಸೇವನೆಗೂ ಅಧ್ಯಯನಕ್ಕೂ ನಿಕಟವಾದ ಸಂಬಂಧವಿದೆ. ನಿದ್ರೆ ಹಾಗೂ ವಿಹಾರ ಆಟೋಟಗಳು ಕೂಡ ನಿಯಮಿತವಾಗಿರಬೇಕು. ಎಲ್ಲರೂ ತಮ್ಮ ಕೆಲಸಗಳನ್ನು ಸ್ವಾವಲಂಬಿಯಾಗಿ ಮಾಡಬೇಕು ಎಂಬ ಜೀವನೋಪಯೋಗಿ ವಿಚಾರಗಳು ಸಂಸ್ಕೃತ ಸಾಹಿತ್ಯದಲ್ಲಿವೆ. ಸಂಸ್ಕೃತ ಅಧ್ಯಯನದಿಂದ ವಿದ್ಯಾರ್ಥಿಗಳು ನಾಳಿನ ಸುಸಂಸ್ಕೃತ ಪ್ರಜೆಗಳಾಗುತ್ತಾರೆ ಎಂದರು.
ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಜಿಲ್ಲೆಯ 99 ವಿದ್ಯಾರ್ಥಿಗಳನ್ನು ಶ್ರೀಮಠದಿಂದ ಗೌರವಿಸಲಾಯಿತು. ನಿವೃತ್ತ ಸಂಸ್ಕೃತ ಶಿಕ್ಷಕ ಅನಂತ ಹೆಬ್ಬಾರ್, ಕೊಪ್ಪ ಸಂಸ್ಕೃತ ಭಾರತೀ ಪದಾಧಿಕಾರಿ ರಾಘವೇಂದ್ರ ಭಟ್, ಸಂಸ್ಕೃತ ಭಾರತೀ ಜಿಲ್ಲಾಧ್ಯಕ್ಷ ಮಹೇಶ್ ಕಾಕತ್ಕರ್, ಸಂಸ್ಕೃತ ಅಧ್ಯಾಪಕರಾದ ಟಿ.ಆರ್.ಕೃಷ್ಣಮೂರ್ತಿ, ಶ್ರೀಶ ಭಟ್, ಕೃಷ್ಣಮೂರ್ತಿ ಹೆಗಡೆ ಇತರರಿದ್ದರು.