ಸಂಶೋಧನಾ ಮನೋಭಾವನೆ ಬೆಳೆಸಿಕೊಳ್ಳಿ

bkt-5-4
ಬಾಗಲಕೋಟೆ ನಗರದ ಕಸಾಪ ಸಭಾಭವನದಲ್ಲಿ ಈಚೆಗೆ ನವನಗರ ಸರ್ಕಾರಿ ಪದವಿ ಕಾಲೇಜು ಕನ್ನಡ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ನಾಡೋಜ ಡಾ.ಗೊ.ರು.ಚನ್ನಬಸಪ್ಪನವರು ಸಂವಾದ ನಡೆಸಿದರು. ಡಾ ಸಣ್ಣವೀರಣ್ಣ ದೊಡ್ಡಮನಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಡಾ.ಸುಮಂಗಲಾ ಮೇಟಿ, ಡಾ.ಸಂತೋಷ ಕಾಳನ್ನವರ ಇದ್ದರು.
Published on

ಬಾಗಲಕೋಟೆ: ಪದವಿ ಓದುವ ವಿದ್ಯಾರ್ಥಿಗಳು ಕಾಲಕ್ಕನುಗುಣವಾಗಿ ಬರುವ ತಂತ್ರಜ್ಞಾನ ಬಳಸಿಕೊಳ್ಳಬೇಕು. ಮೌಖಿಕ ಪರಂಪರೆಯಿಂದ ಬಂದಿರುವ ಜಾನಪದ ಸಾಹಿತ್ಯ ಸಂಪಾದನೆ ಮಾಡಬೇಕು. ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಾಡೋಜ ಡಾ.ಗೊ.ರು.ಚನ್ನಬಸಪ್ಪನವರು ಹೇಳಿದರು.

ನಗರದ ಕಸಾಪ ಸಭಾಭವನದಲ್ಲಿ ಈಚೆಗೆ ನವನಗರ ಸರ್ಕಾರಿ ಪದವಿ ಕಾಲೇಜು ಕನ್ನಡ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಡಾ.ಗೊರುಚ ಅವರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿತ್ಯವು ಹೊಸ ಪಾಠ, ಅಧ್ಯಯನದಿಂದ ಹೊಸ ವಿಷಯ ಕಲಿತುಕೊಳ್ಳಲು ಸಾಧ್ಯವಿದೆ. ಪಾಂಡಿತ್ಯ ಸಾಧಿಸುವನಿಟ್ಟಿನಲ್ಲಿ ನಮ್ಮ ಗಮನ ಇರಬೇಕು. ಪಠ್ಯದ ಜೊತೆಗೆ ಇತರೆ ವಿಷಯ ಬಗ್ಗೆ ಆಸಕ್ತಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಽಕಾರದ ಸಶಕ್ತ ಭಾಷಾ ನೀತಿ ತಜ್ಞರ ಸಮಿತಿ ಸದಸ್ಯ ಡಾ ಸಣ್ಣವೀರಣ್ಣ ದೊಡ್ಡಮನಿ ಮಾತನಾಡಿ, ಜಾನಪದ ವಿಶ್ವವಿದ್ಯಾಲಯ ಕೇವಲ ಕಡತಗಳ ವಿಶ್ವವಿದ್ಯಾಲಯ ಆಗಿದೆ. ಉತ್ತರ ಕರ್ನಾಟಕದ ಕಲಾವಿದರ ಅಭಿವ್ಯಕ್ತಿ ಮಾಧ್ಯಮವಾಗಿ ಬೆಳೆಯಲು ಸರ್ಕಾರ ಯೋಚಿಸುತ್ತಿಲ್ಲ. ನಾಡೋಜ ಡಾ.ಗೊ.ರು.ಚನ್ನಬಸಪ್ಪನವರ ಕನಸಿನ ಕೂಸಾದ ಜಾನಪದ ವಿಶ್ವವಿದ್ಯಾಲಯ ಎತ್ತರಕ್ಕೆ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಕಲಾ ಪ್ರಕಾರಗಳಾದ ತೊಗಲು ಗೊಂಬೆಯಾಟ, ಸಂಪ್ರದಾಯದ ಹಾಡುಗಳು, ಡೊಳ್ಳಿನ ಮೇಳ, ಹೆಜ್ಜೆ ಕುಣಿತ, ವೀರಗಾಸೆ, ಕರಡಿ ಮಜಲು ಪ್ರತ್ಯೇಕ ವಿಭಾಗಗಳಾಗಿ ಮುಖ್ಯ ವಾಹಿನಿಗೆ ಬರಬೇಕು. ಯಾವುದೇ ಪದವಿ ಓದಲಾರದೆ ಕಲೆಯೇ ಉಸಿರಾಗಿಸಿಕೊಂಡಿರುವ ಕಲಾವಿದರ ಬದುಕಿನ ಕಲೆ ಅನಾವರಣ ಆಗಬೇಕು. ಮೌಖಿಕ ಬೇರುಗಳು ಜತನಗೊಳ್ಳಬೇಕು. ಜನಪದ ಕಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಜನಪದ ವಿಶ್ವವಿದ್ಯಾಲಯ ಇನ್ನಾದರೂ ಗಮನ ಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಡಾ.ಸುಮಂಗಲಾ ಮೇಟಿ, ಡಾ.ಸಂತೋಷ ಕಾಳನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net