ವಿಜಯವಾಣಿ ಸುದ್ದಿಜಲ ಕೋಲಾರ
ಪ್ರಜಾಪ್ರಭುತ್ವದ ಮೂರನೇಯ ಅಂಗ ಮತ್ತು ಸಂವಿಧಾನ ಸಂರಕ್ಷಣೆಯ ಹೊಣೆಗಾರಿಕೆ ನಿರ್ವಹಿಸುತ್ತಿರುವ ಭಾರತದ ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಅವರು ಆಸೀನರಾಗಿದ್ದ ಪೀಠದ ಮೇಲೆ ಸನಾತನವಾದಿ ಮನ:ಸ್ಥಿತಿಯ ಹಿರಿಯ ವಕೀಲ ರಾಕೇಶ್ ಕಿಶೋರ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಶೊ ಎಸೆದು ಸಂವಿಧಾನದ ಪೀಠಕ್ಕೆ ಅಪಮಾನಿಸಿರುವುದನ್ನು ಖಂಡಿಸಿ ಅ.೧೭ನೇ ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋಲಾರ ಜಿಲ್ಲಾ ಬಂದ್‌ಗೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟವು ಕರೆ ನೀಡಿರುವುದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ತೀರ್ಮಾನಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿನ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಪ್ರಜಾ ಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ ೧೪೦ ಕೋಟಿ ಜನತೆಯ ಸಾರ್ವಭೌಮತ್ವಕ್ಕೆ ಮಾಡಿದ ಅಪಮಾನವಾಗಿದೆ. ಇದು ಕೇವಲ ನ್ಯಾಯಮೂರ್ತಿ ಗವಾಯಿ ಅವರ ಮೇಲಿನ ಹಲ್ಲೆಯಾಗಿರದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಇದು ಕೋಮುವಾದಿ ಸಂಘಟನೆ ಆರ್.ಎಸ್.ಎಸ್. ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂಥಹ ಕೃತ್ಯ ನಡೆದಿರುವುದು ಈ ದೇಶದಲ್ಲಿ ಮತ್ತು ಮನುಸ್ಪೃತಿಯನ್ನು ಶಾಸನವಾಗಿ ಮತ್ತೆ ಪ್ರತಿಷ್ಟಾಪಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಭಾರತವು ಜಾತ್ಯಾತೀತ ದೇಶವಾಗಿದ್ದು, ಸಾರ್ವಜನಾಂಗೀಯ ಶಾಂತಿಯ ತೋಟವಾಗಿತ್ತು. ಈ ತೋಟದಲ್ಲಿ ಸನಾತನಿಗಳು ವಿಷ ಬೀಜವನ್ನು ಬಿತ್ತನೆ ಮಾಡುವ ಮೂಲಕ ಮನುವಾದಿ ಮನಸ್ಥಿತಿಗಳನ್ನು ಹುಟ್ಟು ಹಾಕುವ ಹುನ್ನಾರಗಳು ನಡೆಯುತ್ತಿದೆ. ದೇಶದ ಜನತೆಯ ಸ್ವಾಭಿಮಾನ, ಸಾರ್ವಭೌಮತೆ ಎತ್ತಿ ಹಿಡಿಯಲು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಸಂರಕ್ಷಣೆ ಮಾಡಿಕೊಳ್ಳುವ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಹಾಗೂ ದೇಶ ದ್ರೋಹಿ ಮನುವಾದಿ ಸನಾತನಿ ಸಂತತಿಗಳ ನಡೆಯನ್ನು ಖಂಡಿಸಿ ಅ.೧೭ ಶುಕ್ರವಾರ ಜಿಲ್ಲಾದಾದ್ಯಂತ ಸ್ವಯಂ ಪ್ರೇರಿತ ಬಂದ್ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಭಾರತ ದೇಶವನ್ನು ಸಾರ್ವಭೌಮ ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸಮಾನತೆ, ಸೋದರತೆ, ಜಾತ್ಯಾತೀತತೆಯನ್ನು ಬಯಸುವ ದ.ಸಂ.ಸ. ಪ್ರಗತಿ ಹಾಗೂ ಕನ್ನಡಪರ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಭಾಷಾ. ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಮತ್ತು ಸಂವಿಧಾನ ಸಂರಕ್ಷಣೆ ಬಯಸುವ ಪ್ರತಿಯೊಬ್ಬರು ಈ ಸ್ವಯಂ ಪ್ರೇರಿತ ಬಂದ್‌ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾ ಗೋಷ್ಠಿಯಲ್ಲಿ ದ.ಸಂ.ಸ ಮುಖಂಡ ಟಿ.ವಿಜಯಕುಮಾರ್, ಗಮಕ ಶಾಂತಮ್ಮ, ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಆಲ್ಪಸಂಖ್ಯಾತರ ಮುಖಂಡ ಅನ್ವರ್ ಪಾಷ, ಸಂಯುಕ್ತ ದಲಿತ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ಡಿಲಿಟ್ ಡಾ. ಎಂ.ಚAದ್ರಶೇಖರ್
ಪಿ.ವಿ.ಸಿ. ಎ.ಕೃಷ್ಣಪ್ಪ, ಎಸ್.ಎಫ್.ಐ. ರಾಜ್ಯ ಮಾಜಿ ಅಧ್ಯಕ್ಷ ವಿ.ಅಂಬರೀಷ್, ವರದೇನಹಳ್ಳಿ ವೆಂಕಟೇಶ್, ಹಾರೋಹಳ್ಳಿ ರವಿ, ಡಿ.ಎಸ್.ಎಸ್. (ಅಂಬೇಡ್ಕರ್ ವಾದ) ಶ್ರೀರಂಗ, ಸಂಗಸAದ್ರ ವಿಜಯ ಕುಮಾರ್. ಸುಬ್ರಮಣಿ, ಈನೆಲ ಈಜಲ ವೆಂಕಟಾಚಲಪತಿ ಮುಂತಾದವರು ಇದ್ದರು.
ಚಿತ್ರ ೧೪ ಕೆ.ಎಲ್.ಆರ್. ೦೫ : ಪತ್ರಕರ್ತರ ಭವನದಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ಮುಖಂಡ ಟಿ.ವಿ.ವಿಜಯಕುಮಾರ್, ಗಮಕ ಶಾಂತಮ್ಮ ಮುಂತಾದವರು ಇದ್ದರು.