

ಜಗಜಿತ್ ಸಿಂಗ್ ದಲೈವಾಲ ಪ್ರಾಣ ಉಳಿಸಲು ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಸಾಲ ಮನ್ನಾ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲೈವಾಲ ಅವರು ನ.26ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದ್ದು ದೇಹ ನಿತ್ರಾಣಗೊಂಡು ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ರೈತ ನಾಯಕನ ಪರಿಸ್ಥಿತಿ ಈ ಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಕಿಡಿಕಾರಿದರು.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಅಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿದ ಸರ್ಕಾರ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೋತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆ ನೀಡಿತ್ತು. ಆದರೆ ಈ ಭರವಸೆಗೆ ವಿರುದ್ಧವಾಗಿ ನಡೆದುಕೊಂಡಿದೆ. ದೇಶಾದ್ಯಂತ ಎಲ್ಲ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಪಾವತಿ ಮಾಡುವಂತೆ ಬಲವಂತದಿಂದ ಆಧಾರ್ ಕಾರ್ಡ್ ಜೋಡಣೆ ಪೂರ್ಣಗೊಳಿಸಿದೆ. ರೈತರ ಬೆಳೆಗಳನ್ನು ಸಕಾಲದಲ್ಲಿ ಖರೀದಿಸುತ್ತಿಲ್ಲ. ರೈತ ವಿರೋಧಿ ಧೋರಣೆ, ರೈತರ ಆಗ್ರಹಗಳನ್ನು ನಿರ್ಲಕ್ಷ ಮಾಡಿದ್ದರ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಕೂಡಲೇ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ರಾಜ್ಯ ಸರ್ಕಾರ ಕೂಡ ರೈತ ನಾಯಕರ ಪ್ರಾಣ ಉಳಿಸಲು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ಮರಂಕಯ್ಯ, ಹೊಸೂರು ಕುಮಾರ್, ಉಗ್ರ ನರಸಿಂಹೇಗೌಡ, ಜಯರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು.