

ಕರೊನಾ ಸುರಕ್ಷತಾ ನಿಯಮಗಳೊಂದಿಗೆ 73ನೇ ಗಣರಾಜ್ಯೋತ್ಸವದ ಆಚರಣೆಗೆ ದೇಶವಿಂದು ಸಾಕ್ಷಿಯಾಗುತ್ತಿದೆ. ನಡೆದುಬಂದ ಹಾದಿಯನ್ನು ಅವಲೋಕಿಸಿದರೆ ಹೆಮ್ಮೆಯೂ, ಪ್ರಜಾತಂತ್ರದ ಸಾರ್ಥಕ ಭಾವವೂ ಆವರಿಸಿಕೊಳ್ಳುತ್ತದೆ. ರಾಷ್ಟ್ರೀಯ ಏಕತೆಯನ್ನು, ಸಾಮರಸ್ಯದ ಭಾವವನ್ನು ಸಮರ್ಥವಾಗಿ ಪ್ರದರ್ಶಿಸುವ ದೊಡ್ಡ ಪರ್ವವಾಗಿ ಗಣರಾಜ್ಯೋತ್ಸವ ಆಚರಿಸಲ್ಪಡುತ್ತದೆ. ಈ ಬಾರಿ ಕರೊನಾದ ಮೂರನೇ ಅಲೆಯ ಪರಿಣಾಮ ಸಂಭ್ರಮ ಕೊಂಚ ಕಡಿಮೆಯಾಗಿದೆಯಾದರೂ, ಜನರ ಭಾವನಾತ್ಮಕ ಏಕತೆಯಲ್ಲಿ ಯಾವುದೇ ಬದಲಾವಣೆ, ಕೊರತೆ ಇಲ್ಲ.
ವಿಶ್ವದಲ್ಲಿನ ಹಲವು ರಾಷ್ಟ್ರಗಳಲ್ಲಿರುವ ಸರ್ವಾಧಿಕಾರತ್ವ, ಅರಾಜಕತೆ, ಆಡಳಿತ ಹಸ್ತಾಂತರಕ್ಕಾಗಿನ ಸಂಘರ್ಷ ಮುಂತಾದ ಅಪಸವ್ಯಗಳನ್ನು ಗಮನಿಸಿದರೆ ಭಾರತ ಗಣರಾಜ್ಯದ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವುದು ಮತ್ತು ಚುನಾವಣೆಗಳು ಪ್ರಜಾಪ್ರಭುತ್ವದ ಉತ್ಸವಗಳಂತೆ ನಡೆಯುತ್ತಿರುವುದು ಸ್ಪಷ್ಟಗೋಚರ. ಹಾಗಾಗಿಯೇ, ಜಗತ್ತಿನ ಪ್ರಮುಖ ರಾಷ್ಟ್ರಗಳು ಕೂಡ ಸುಧಾರಣೆಯ ನವಪಥಗಳಿಗಾಗಿ ಭಾರತದತ್ತ ಆಶಾವಾದದಿಂದ ನೋಡುತ್ತಿವೆ. 140 ಕೋಟಿಯಷ್ಟು ಬೃಹತ್ ಜನಸಂಖ್ಯೆ, ವಿವಿಧ ಭಾಷೆ, ಧರ್ಮಗಳು ನೆಲೆಸಿದ್ದರೂ, ಏಕಸೂತ್ರದಡಿ ಮುಂದೆ ಸಾಗುತ್ತಿರುವುದು ಪ್ರಜಾಪ್ರಭುತ್ವದ ಶಕ್ತಿಯೇ.
ಈ ಸಂಭ್ರಮ-ಸಡಗರಗಳನ್ನು ಆಸ್ವಾದಿಸುವುದರ ಜತೆಗೆ ಒಂದಷ್ಟು ಆತ್ಮಾವಲೋಕನಕ್ಕೂ ನಾವು ಮುಂದಾದಲ್ಲಿ ಒಳಿತು. ಪ್ರಜಾಪ್ರಭುತ್ವವಾದಿ ರಾಷ್ಟ್ರವೊಂದರ ಸಂವಿಧಾನದ ಸದಾಶಯಗಳನ್ನು ಎಷ್ಟರಮಟ್ಟಿಗೆ ಪರಿಪಾಲಿಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಜವಾಬ್ದಾರಿಯುತ ಪ್ರಜೆಗಳಾಗಿ ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಇದು ರಾಜಕಾರಣ ಮತ್ತು ಅಧಿಕಾರಿಶಾಹಿ ವಲಯಕ್ಕೂ ಅನ್ವಯವಾಗುವ ಪ್ರಶ್ನೆ. ಕಾರಣ, ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ದಾರಿದೀಪವಾಗಬೇಕಿರುವ ವಿವಿಧಸ್ತರದ ಹಲವು ಜನಪ್ರತಿನಿಧಿಗಳು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸ್ವೇಚ್ಛಾವರ್ತನೆಯಲ್ಲಿ ತೊಡಗಿದ್ದು, ತನ್ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿರುವ ಸಾಕಷ್ಟು ನಿದರ್ಶನಗಳು ಕಣ್ಣೆದುರಿನ ವಾಸ್ತವವಾಗಿವೆ. ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು, ಚುನಾವಣೆ ಪ್ರಕ್ರಿಯೆಗಳು ರಾಜಕೀಯ ಚಿಂತನೆಯ ಬಲದ ಮೇಲೆ ನಡೆಯುವುದು ಬಿಟ್ಟು, ಕೀಳು ಆರೋಪ, ವೈಯಕ್ತಿಕ ತೇಜೋವಧೆಯ ಮಟ್ಟಕ್ಕೆ ಇಳಿದಿರುವುದು ದುರ್ದೈವದ ಸಂಗತಿ. ಈ ಚಿತ್ರಣ ಬದಲಾಗದ ಹೊರತು, ಗಣತಂತ್ರದ ನಿಜವಾದ ಆಶಯ ಈಡೇರಲು ಸಾಧ್ಯವಿಲ್ಲ.
ಆದ್ದರಿಂದ, ಜನರು ‘ಮೂಲಭೂತ ಹಕ್ಕು’ ಎಂಬ ಕಾರಣಕ್ಕಷ್ಟೇ ಮತದಾನಕ್ಕೆ ಮುಂದಾಗದೆ, ಒಂದು ಸಂವೇದನಾಶೀಲ, ಉತ್ತರದಾಯಿ ಹಾಗೂ ಆರೋಗ್ಯಕರ ಆಡಳಿತ ವ್ಯವಸ್ಥೆಯನ್ನು ಕಟ್ಟುವುದರ ಮೊದಲ ಹಂತವಾಗಿ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಗಳನ್ನು ನಮ್ಮ ನಾಯಕರಾಗಿಸಿಕೊಳ್ಳುವ ‘ನಾಗರಿಕ ಹೊಣೆಗಾರಿಕೆ’ಯನ್ನು ನಾವು ಮೆರೆಯಬೇಕಿದೆ. ಇಡೀ ವಿಶ್ವಕ್ಕೇ ಅಧ್ಯಾತ್ಮದ ಹಿರಿಮೆಯನ್ನು ಪಸರಿಸಿದ ದೇಶ ಭಾರತ. ಹಾಗಾಗಿ ನೈತಿಕತೆ, ಪಾರದರ್ಶಕತೆ, ಉತ್ತರದಾಯಿತ್ವ, ಋಜುತ್ವಗಳ ನಿಟ್ಟಿನಲ್ಲಿಯೂ ಈ ಪುಣ್ಯಭೂಮಿ ಮಾದರಿಯಾಗಿ ಹೊಮ್ಮಬೇಕಿದೆ. ಬಹಿರಂಗ ಶುದ್ಧಿಯ ಜತೆಗೆ ಅಂತರಂಗ ಶುದ್ಧಿಯ ಪರಿಕಲ್ಪನೆಗೂ ಮಹತ್ವನೀಡಿದ ದೇಶ ನಮ್ಮದು. ಈ ನಿಟ್ಟಿನಲ್ಲೂ ಕ್ರಾಂತಿಕಾರಕ ಹೆಜ್ಜೆಗಳನ್ನಿಡುವಂತಾದರೆ, ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಮೆರುಗು ಬಂದೀತು. ಅಂಥದೊಂದು ಸಂಕಲ್ಪಕ್ಕೆ ಕಟಿಬದ್ಧರಾಗಲು ಇಂದಿನ ಗಣತಂತ್ರ ದಿವಸ ನಾಂದಿಹಾಡಲಿ.