ಸಂಪಾದಕೀಯ | ಅರಿವು, ಎಚ್ಚರ ಅಗತ್ಯ: ಯುವಜನರ ಟೆಕ್ ​ಪ್ರೀತಿ, ತರದಿರಲಿ ಫಜೀತಿ..

Editorial
Published on

ಮೂರ್ನಾಲ್ಕು ದಿನಗಳಿಂದ ಬುಲ್ಲಿ ಬಾಯ್ ಎಂಬ ಮೊಬೈಲ್ ಅಪ್ಲಿಕೇಷನ್ (ಆ್ಯಪ್​) ಬಹಳ ಸುದ್ದಿಯಲ್ಲಿದೆ. ಈ ಆಪ್​ನಲ್ಲಿ ಮುಸ್ಲಿಮ್ ಮಹಿಳೆಯರ ತಿರುಚಲಾದ ಫೋಟೊಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಈವರೆಗೆ ಇಬ್ಬರು ವಿದ್ಯಾರ್ಥಿಗಳು ಮತ್ತು ಓರ್ವ ಯುವತಿಯನ್ನು ಬಂಧಿಸಿದ್ದಾರೆ. ಈ ಕುರಿತಂತೆ ಇನ್ನಷ್ಟು ವಿವರಗಳು ಹೊರಬರಬೇಕಿದೆ. ಸದ್ಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈಗ ಬಂಧಿಸಲ್ಪಟ್ಟಿರುವ ಉತ್ತರಾಖಂಡದ ಯುವತಿ ಈ ಆಪ್​ನ ಸೂತ್ರಧಾರಳಾಗಿದ್ದು, ಆಕೆ ಹಣಕ್ಕೋಸ್ಕರ ಹೀಗೆ ಮಾಡಿರಬಹುದು. ಉಳಿದಿಬ್ಬರ ಪಾತ್ರ ಏನು, ಅವರ ಮೇಲಿನ ಆರೋಪದ ಸ್ವರೂಪ ಏನು ಇತ್ಯಾದಿ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಇದೇನೇ ಇದ್ದರೂ, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲಿ ಸಕ್ರಿಯರಾಗಿರುವ ಜನರು ವಿಶೇಷವಾಗಿ ಯುವಜನರು ಈ ಬಗ್ಗೆ ಅರಿವು ಮತ್ತು ಎಚ್ಚರಿಕೆ ಹೊಂದಿರಬೇಕೆಂಬುದನ್ನು ಈ ಪ್ರಕರಣ ಶ್ರುತಪಡಿಸುತ್ತದೆ. ಬುಲ್ಲಿ ಬಾಯ್ ಎಂಬುದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದು ಗೂಗಲ್ ಪ್ಲೇಸ್ಟೋರ್ ರೀತಿಯ ಇನ್ನೊಂದು ವೇದಿಕೆಯಾದ ಗಿಟ್​ಹಬ್​ನಲ್ಲಿ ದೊರೆಯುತ್ತದೆ. ಈ ಆಪ್​ನಲ್ಲಿ ಮುಸ್ಲಿಮ್ ಮಹಿಳೆಯರ ತಿರುಚಲಾದ ಫೋಟೊಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ಎಂದು ಪತ್ರಕರ್ತೆಯೊಬ್ಬರು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ನಂತರದಲ್ಲಿ ಈ ಬಗ್ಗೆ ದೂರು ದಾಖಲಾಗಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣದ ಒಟ್ಟಾರೆ ವಿವರ ಮುಂದಿನ ತನಿಖೆಯಲ್ಲಿ ಗೊತ್ತಾಗಬೇಕಿದೆಯಾದರೂ, ಇದು ಸಮಾಜಕ್ಕೆ ಹಲವು ಸಂದೇಶಗಳನ್ನಂತೂ ರವಾನಿಸಿದೆ. ಇವತ್ತಿನ ಕಾಲಮಾನದಲ್ಲಿ ಬಹಳ ಜನರ ಕೈಲಿ ಆಂಡ್ರಾಯ್್ಡ ಮೊಬೈಲ್ ಇರುತ್ತದೆ. ಹೀಗಾಗಿ ಕ್ಷಣಾರ್ಧದಲ್ಲಿ ವಿಶ್ವದ ಆಗುಹೋಗುಗಳನ್ನು ಅರಿಯಬಹುದು ಮತ್ತು ಬೇಕಾದ ಮಾಹಿತಿಯನ್ನು ಇದ್ದಲ್ಲೇ ಪಡೆಯಬಹುದು. ವಿದ್ಯಾರ್ಥಿಗಳಿಗಂತೂ ಇದು ಒಂದು ರೀತಿಯಲ್ಲಿ ವರದಾನವೇ ಸರಿ. ಆದರೆ ಅಂತರ್ಜಾಲ ವೇದಿಕೆಯನ್ನು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ಅದರ ಸಾಧಕ-ಬಾಧಕ ಅವಲಂಬಿತವಾಗುತ್ತದೆ. ಅದರಲ್ಲೂ ಈಗಂತೂ ಮಾಹಿತಿಯ ಮಹಾಪೂರವೇ ಹರಿದುಬರುತ್ತದೆ ಮತ್ತು ಡಿಜಿಟಲ್ ವೇದಿಕೆಗಳ ಪ್ರಮಾಣವೂ ಹೆಚ್ಚಿದೆ. ಯುವಜನರಿಗೆ ತಂತ್ರಜ್ಞಾನ ಬಳಕೆ ಬಹಳ ಸುಲಭವಾದ್ದರಿಂದ ಇದಕ್ಕೆ ಅಂಟಿಕೊಂಡೇ ಇರುತ್ತಾರೆ.

ಇನ್ನೊಂದೆಡೆ, ಸರ್ಕಾರಗಳು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ವ್ಯವಸ್ಥೆಯನ್ನೂ ಕಲ್ಪಿಸುತ್ತಿವೆ. ಇದರಿಂದ ಇಂಟರ್ನೆಟ್ ಬಳಕೆ ಮತ್ತಷ್ಟು ಸುಲಭವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಬಳಕೆ ಕುರಿತಂತೆ ಕೆಲ ತಿಂಗಳ ಹಿಂದೆ ಸಮೀಕ್ಷಾ ವರದಿಯೊಂದು ಪ್ರಕಟವಾಗಿತ್ತು. ಅ ವರದಿ ಪ್ರಕಾರ, ಇಂಥ ಸ್ಥಳಗಳಲ್ಲಿ ಹೆಚ್ಚಿನ ಸಮಯ ಇಂಟರ್ನೆಟ್ ಬಳಕೆಯಾಗಿದ್ದು, ಅಶ್ಲೀಲ ವಿಡಿಯೋಗಳನ್ನು ಡೌನ್​ಲೋಡ್ ಮಾಡಲು ಮತ್ತು ವೀಕ್ಷಿಸಲು! ಇಂಥ ಪ್ರವೃತ್ತಿ ಬೆಳೆದಲ್ಲಿ ಉದ್ದೇಶಸಾಧನೆ ಆಗುವುದಾದರೂ ಹೇಗೆ? ಅದರಿಂದ ಆಗುವ ದುಷ್ಪರಿಣಾಮಗಳು ಕಡಿಮೆಯಾ? ಸಾರ್ವಜನಿಕ ಸ್ಥಳಗಳಲ್ಲಿ ಇಂಟರ್ನೆಟ್ ಸವಲತ್ತು ಕಲ್ಪಿಸುವ ಉದ್ದೇಶ ಏನು ಎಂದು ಅರಿಯದೆ ಹೀಗೆ ಮಾಡಿದಲ್ಲಿ ಸಮಾಜದ ಆರೋಗ್ಯದ ಕಥೆಯೇನು? ಅಂತರ್ಜಾಲ ವೇದಿಕೆಯ ಸದ್ಬಳಕೆ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕಾದ ಮತ್ತು ತತ್ಸಂಬಂಧಿ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ಕೆಲಸ ತ್ವರಿತವಾಗಿ ಮತ್ತು ವ್ಯಾಪಕವಾಗಿ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net