

ಹುಣಸೂರು: ಸಂಘಟಿತ ಪ್ರಯತ್ನದಿಂದ ಮಾತ್ರ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ವನ್ನಿಯ ಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಎಸ್. ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಎಸ್‌ಎಲ್‌ವಿ ಕಲ್ಯಾಣಮಂಟಪದಲ್ಲಿ ಮಂಗಳವಾರ ವನ್ನಿಯ ಕುಲಕ್ಷತ್ರಿಯ ಸಂಘದ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ, ರಾಜ್ಯ ವನ್ನಿಯ ಕುಲಕ್ಷತ್ರಿಯ ಜನಾಂಗದ ಪೂರ್ವಜರಲ್ಲಿ ಮೂಲಪುರುಷ ಶ್ರೀ ವೀರರುದ್ರ ವನ್ನಿಯ ಮಹಾರಾಜ ಸೇರಿದಂತೆ ಹಲವರು ರಾಜರಾಗಿ ಆಳ್ವಿಕೆ ನಡೆಸಿದ್ದಾರೆ. ಹಲವು ದೇವಸ್ಥಾನಗಳ ನಿರ್ಮಾಣದಲ್ಲಿ ನಮ್ಮ ಪೂರ್ವಿಕರ ಕೊಡುಗೆ ಅಪಾರವಾಗಿದೆ. ಈಗ ನಮ್ಮ ಜನಾಂಗದವರು ವ್ಯವಸಾಯ ಮತ್ತು ಗುತ್ತಿಗೆ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಮತ್ತು ಬೆಂಬಲ ಅಗತ್ಯ. ಸಮುದಾಯದ ಯುವಕರು ಶಿಕ್ಷಣದೊಂದಿಗೆ ರಾಜಕೀಯ ಅದಿಕಾರ ಪಡೆಯಲು ಯತ್ನಿಸಬೇಕೆಂದು ಸಲಹೆ ನೀಡಿದರು.
ತಾಲೂಕು ಅಧ್ಯಕ್ಷ ಸಹದೇವ ಮಾತನಾಡಿ, ಹಿಂದೆ ತಾಲೂಕಿನಲ್ಲಿ ಜನಾಂಗದ ಸಂಘವನ್ನು ಸ್ಥಾಪಿಸಲಾಗಿತ್ತು. ಕಾರಣಾಂತರದಿಂದ ಸಂಘ ಸಕ್ರಿಯವಾಗಿರಲಿಲ್ಲ. ಈಗ ಮರುಜೀವ ನೀಡಿದ್ದು, ಜನಾಂಗದವರೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿದರು. ಹುಣಸೂರು ಮಠದ ಶ್ರೀ ದೇವರಾಜ ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಉಪಾಧ್ಯಕ್ಷ ಪಳನಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್.ಸಿ. ತಂಗವೇಲು ವನ್ನಿಯ, ಡಾ.ಎಂ. ಹರೀಶ್, ಚಲನಚಿತ್ರ ನಿರ್ದೇಶಕ ಸೆಂದಿಲ್‌ಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಮತ್ತು ಬಂಧುಗಳು ಹಾಜರಿದ್ದರು.