ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ೧೦೩೫ ಎಕರೆಅರಣ್ಯ ಭೂಮಿಯ ಒತ್ತುವರಿ ತೆರವು/ಏಡುಕೊಂಡಲು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕಳೆದ ೧೫ ದಿನಗಳಿಂದ ಅರಣ್ಯ ಇಲಾಖೆಯ ೧೦೩೫ ಎಕರೆ ಭೂಮಿಯ ಒತ್ತುವರಿ ತೆರವು ಮಾಡಲಾಗಿದೆ, ಮಲ್ಲಂಪಲ್ಲಿ, ದಳಸನೂರು ಹಾಗೂ ಶ್ರೀನಿವಾಸಪುರಕ್ಕೆ ಸೇರಿದ ಮೂರು ಭಾಗದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಲಾಗಿದೆ ಎಂದು ಜಿಲ್ಲಾ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದರು.

ನಗರದ ಹೊರವಲಯದ ಸಾಮಾಜಿಕ ಅರಣ್ಯ ಸಂರಕ್ಷಣ ಇಲಾಖೆಯ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಒತ್ತುವರಿ ಜಾಗವನ್ನು ಕಾನೂನು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಾಯ್ದೆ ಪ್ರಕಾರ, ನ್ಯಾಯಾಲಯದ ಆದೇಶದ ಪ್ರಕಾರ ಪೊಲೀಸ್, ಕಂದಾಯ ಇಲಾಖೆಯ ಸಹಕಾರದೊಂದಿಗೆ ತೆರವು ಮಾಡಿಸಿ, ಸಾರ್ವಜನಿಕರ ಸಂಪತ್ತುನ್ನು ಭೂ ಮಾಫಿಯಾದಿಂದ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದರು.

ಅರಣ್ಯ ಇಲಾಖೆಯ ಒತ್ತುವರಿ ಮಾಡಿಕೊಂಡಿರುವ ೧೦೩೫ ಎಕರೆ ಜಾಗದಲ್ಲಿ ಮಾವು, ಕೆಲವು ಜಾಗಗಳಲ್ಲಿ ತರಕಾರಿಬೆಳೆ ಹೊರತುಪಡಿಸಿದರೆ ಉಳಿದಂತೆ ಯಾವುದೇ ಬೆಳೆಗಳಿಲ್ಲ. ಒತ್ತುವರಿದಾರರು ಯಾರೂ ಸಣ್ಣ, ಪುಟ್ಟ ರೈತರಿಲ್ಲ, ಎಲ್ಲರೂ ದೊಡ್ಡ ರೈತರೇ ಆಗಿದ್ದು, ಒಬ್ಬಬ್ಬರೂ ೨೫ ರಿಂದ ೩೦, ೪೦ ಹೀಗೆ ೧೦೦ ಎಕರೆಯ ತನಕ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದರು ಎಂದು ಸ್ವಷ್ಟಪಡಿಸಿದರು.

ಸಾರ್ವಜನಿಕರ ಸಂಪತ್ತನ್ನು ಉಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು, ಇದರಲ್ಲಿ ನಮ್ಮ ವೈಯುಕ್ತಿಕ ಆಸಕ್ತಿ ಇಲ್ಲ. ಅರಣ್ಯವನ್ನು ಉಳಿಸಬೇಕಾದ್ದು, ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಹೊರತಾಗಿ ನಮಗೆ ಯಾವ ಉದ್ದೇಶವು ಇಲ್ಲ. ನಮಗೆ ಯಾರ ಒತ್ತಡವು ಇಲ್ಲ. ಕಳೆದ ೨೦೦೧ ರಿಂದ ಕೆಲವು ಪ್ರಭಾವಿತರು ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದರು.

ಹಲವಾರು ಭಾರಿ ಒತ್ತುವರಿದಾರರಿಗೆ ಇಲಾಖೆಯ ಕಾಯ್ದೆಗಳ ಕುರಿತು ಸೂಚನೆಗಳನ್ನು ನೀಡಲಾಗಿತ್ತು, ಆದರೆ ಒಂದು ಬೆಳೆ ಫಸಲು ಬಂದ ಬೆನ್ನ ಹಿಂದೆಯೇ ಮತ್ತೊಂದು ಬೆಳೆ ಇಡುತ್ತಿದ್ದರಿಂದ ಹಿಂದಿನ ಅಧಿಕಾರಿಗಳಿಗೆ ಒತ್ತುವರಿ ತೆರವು ಮಾಡಿಸಲು ಅಡ್ಡಿಪಡಿಸುತ್ತಾ ಬರುತ್ತಿದ್ದರು, ಹಲವಾರು ಬಾರಿ ಒತ್ತುವರಿದಾರರಿಗೆ ತೆರವು ಮಾಡಲು ನೀಡಿದ್ದ ಅವಕಾಶಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಈ ಭಾರಿ ಹಠಾತ್ತನೇ ದಾಳಿ ಮಾಡುವುದು ಅನಿವಾರ್ಯವಾಗಿತ್ತು ಎಂದರು.

ಅರಣ್ಯ ಭೂಮಿಗಳನ್ನು ಕೆಲವು ಪ್ರತಿಷ್ಟರಿಂದ ತೆರವು ಮಾಡಿದ್ದರಿಂದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯನ್ನು ಅಭಿನಂದಿಸುತ್ತಿದ್ದಾರೆ. ಅರಣ್ಯ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಕ್ಕೆ ಪಡೆದಿದ್ದ ಭೂ ಮಾಫಿಯಗಳನ್ನು ತೆರವು ಮಾಡಿಸಬೇಕೆಂದು ಒತ್ತಾಯವು ಇತ್ತು, ತೆರವು ಪಡಿಸಲು ಹೋದರೆ ಕೆಲವು ರೈತರನ್ನು ಮುಂದು ಮಾಡಿ ತೆರವು ಮಾಡಿಸಲು ಅಡ್ಡಿ ಪಡಿಸುತ್ತಿದ್ದರು. ಇದು ನಿರಂತರವಾಗಿ ಮುಂದುವರೆದಿತ್ತು ಇದಕ್ಕೆ ಅಂಕುಷ ಹಾಕಲು ಈ ಸಮಯವು ಸೂಕ್ತವೆಂದು ನಿರ್ಧರಿಸಿ ಅರಣ್ಯ ಇಲಾಖೆಯ ಆಪರೇಷನ್ ಕೈಗೆತ್ತಿಕೊಂಡಿತು ಎಂದರು.

ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರು ಜನರನ್ನು ದಿಕ್ಕು ತಪ್ಪಿಸುವ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆವುಂಟು ಮಾಡಲು ಪ್ರಯತ್ನಿಸಿದ್ದಾರೆ. ಒತ್ತುವರಿದಾರರಿಗೆ ನೋಟಿಸ್ ಕೊಟ್ಟಿಲ್ಲ, ಪಿತ್ರಾರ್ಜಿತ ಕಾಲದಿಂದ ಸ್ವಾಧೀನದಲ್ಲಿತ್ತು, ಸರ್ಕಾರವು ನೀಡಿರುವ ದಾಖಲೆಗಳನ್ನು ಅರಣ್ಯ ಇಲಾಖೆ ಧಿಕ್ಕರಿಸಿದೆ, ಮರಗಳನ್ನು ಸಂರಕ್ಷಿಸುವAತ ಇಲಾಖೆಯೇ ಮರಗಳನ್ನು ನಾಶ ಮಾಡುತ್ತಿದೆ. ಮರಗಳನ್ನು ಕಡಿಯುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಜನರನ್ನು ದಿಕ್ಕುತಪ್ಪಿಸುವ ತಪ್ಪು ಮಾಹಿತಿಗಳನ್ನು ನೀಡಿ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಯಾರೋ ನಂಬಬಾರದು, ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಒತ್ತುವರಿ ತೆರವು ಕಾರ್ಯಾಚರಣೆ ಇದು ಪ್ರಾರಂಭ ಅಷ್ಟೇ ಅರಣ್ಯ ಒತ್ತುವರಿ ಇತರೆ ತಾಲ್ಲೂಕುಗಳಲ್ಲೂ ಆಗಿದೆ. ಅವುಗಳೆಲ್ಲವನ್ನು ಹಂತ ಹಂತವಾಗಿ ತೆರವು ಮಾಡಲಾಗುವುದು, ಶತಶೃಂಗ ಪರ್ವತದ ತೇರಹಳ್ಳಿಯ ಬೆಟ್ಟ ಸೇರಿದಂತೆ ವಿವಿಧಡೆ ಒತ್ತುವರಿ ಮಾಡಿರುವುದನ್ನು ತೆರವು ಮಾಡಿಲಾಗುವುದು. ಅರಣ್ಯ ಇಲಾಖೆಯು ತನ್ನ ಒಂದು ಇಂಚು ಜಾಗದ ಒತ್ತುವರಿಯನ್ನು ಬಿಟ್ಟು ಕೊಡಲು ಸಿದ್ದವಿಲ್ಲ. ಇದು ಸಾರ್ವಜನಿಕರ ಸಂಪತ್ತು ಇದನ್ನು ಸಂರಕ್ಷಿಸಲೆAದು ಸರ್ಕಾರವು ಇಲಾಖೆಯನ್ನು ಸ್ಥಾಪಿಸಿ ಅಧಿಕಾರಿಗಳನ್ನು ನೇಮಿಸಿದೆ. ಅರಣ್ಯ ಸಂರಕ್ಷಣೆ ವನ್ಯ ಜೀವಿಗಳ ಸಂರಕ್ಷಣೆ ನಮ್ಮ ಅದ್ಯ ಕರ್ತವ್ಯ ಹಾಗೂ ಜವಾಬ್ದಾರಿಯೂ ಆಗಿದೆ ಎಂದರು.

ಚಿತ್ರ ೧೧. ಕೆ.ಎಲ್.ಆರ್. ೦೬ : ಜಿಲ್ಲಾ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಮಾಧ್ಯಮಗಳೊಂದಿಗೆ ಮಾತನಾಡಿದರು. ಅಧಿಕಾರಿಗಳಾದ ಸಹನ್ ಸುಮಂತ್, ಮಹೇಶ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net