ಶ್ರೀಕಂಠಪುರ ಕೆರೆಯಲ್ಲಿ ಗಣಿಮಾಫಿಯಾಗಳಿಂದ ಅಕ್ರಮ ರಸ್ತೆ ನಿರ್ಮಾಣ / ಮೌನವಹಿಸಿರುವ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ / ಕೆರೆ ಉಳಿಸಲು ಸಾರ್ವಜನಿಕರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಗಣಿಮಾಫಿಯಾಗಳ ಅಟ್ಟಹಾಸದಿಂದ ತಮ್ಮ ಸ್ವಾರ್ಥಕ್ಕಾಗಿ ಕೆರೆಯ ರಾಜಕಾಲುವೆಯನ್ನು ಮುಚ್ಚಿ ಕಟ್ಟೆಯನ್ನು ಹೊಡೆದು ಸುಮಾರು ೫೦ ಅಡಿ ಅಗಲದ ರಸ್ತೆಯನ್ನು ನಿರ್ಮಾಣ ಮಾಡಿ, ತಮ್ಮ ಕ್ರಷರ್‌ಗಳಿಂದ ಕಲ್ಲು ಮತ್ತು ಜಲ್ಲಿಯನ್ನು ರಾಜಾರೋಷವಾಗಿ ಸಾಗಾಣಿಕೆ ಮಾಡುತ್ತಿದ್ದರು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ಹೋಬಳಿ ಶ್ರೀಕಂಠಪುರ ಕೆರೆಯ ಅಂಗಳದಲ್ಲಿ, ನಿಯಮ ಮೀರಿ ಗಣಿಮಾಫಿಯಾಗಳು ಅಕ್ರಮವಾಗಿ ರಸ್ತೆ ನಿರ್ಮಿಸಿರುವುದರ ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಟೇಕಲ್ ಹೋಬಳಿಯ ಮಾಕಾರಹಳ್ಳಿ ಹಾಗೂ ಬೆಟ್ಟಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಸುಮಾರು ೧೦ ಕ್ಕೂ ಹೆಚ್ಚು ಕ್ರಷರ್‌ಗಳು ಇದ್ದು, ಸರ್ಕಾರದಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿವೆ. ಕ್ರಷರ್‌ಗಳಿಂದ ಪ್ರತಿದಿನ ಜಲ್ಲಿ ಮತ್ತು ಕಲ್ಲು ಸಾಗಾಣಿಕೆ ವಾಹನಗಳ ಸಂಚಾರ ಮಾಡುತ್ತಿದ್ದು, ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು, ತಹಶೀಲ್ದಾರ್ ಮತ್ತು ಶಾಸಕರಿಗೆ ಹಾಗೂ ಹಿಂದೆ ಇದ್ದ ಸಂಸದ ಮುನಿಸ್ವಾಮಿಯವರು ಮನವಿ ಸಲ್ಲಿಸಿ, ಸದರಿ ರಸ್ತೆ ಗ್ರಾಮಗಳ ಮಧ್ಯೆ ಇರುವುದರಿಂದ ವಾಹನಗಳ ಧೂಳಿನಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಆರೋಪಿಸಿದರು.

ಆಗಿನ ಮಾಲೂರು ತಹಶೀಲ್ದಾರ್ ರವರು ಆಗಿನ ಸಂಸದ ಮುನಿಸ್ವಾಮಿ ಮತ್ತು ಶಾಸಕ ನಂಜೇಗೌಡರ ಗಮನಕ್ಕೆ ತಂದು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಪರ್ಯಾಯವಾಗಿ ಮಾಕಾರಹಳ್ಳಿಯ ಗೋಮಾಳ ಜಮೀನು ಸರ್ವೇ ನಂ.೧೮೫, ತಿಮ್ಮನಾಯಕನಹಳ್ಳಿ ಅಗ್ರಹಾರ ಸರ್ವೇ ನಂ.೪೫/೧, ೨೫, ೩೬/೧ರಲ್ಲಿ ಮತ್ತು ಶ್ರೀಕಂಠಪುರ ಕರೆಯ ಪಕ್ಕದಲ್ಲಿ ೨೫ ಅಡಿ ಅಗಲ, ೧೫೦ ರಿಂದ ೧೭೦ ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡಲು ಮೌಖಿಕವಾಗಿ ಆಗಿನ ತಹಶೀಲ್ದಾರ್ ಒಪ್ಪಿಗೆ ನೀಡಿದರು.

ಆದರೆ ಕ್ರಷರ್ ಮಾಲೀಕರು ಈ ಯಾವುದನ್ನೂ ಲೆಕ್ಕಿಸದೆ ಶ್ರೀಕಂಠಪುರ ಕೆರೆ ಕಟ್ಟೆ ಹೊಡೆದು ಕೆರೆಗೆ ನೀರು ಬರುವ ರಾಜಕಾಲುವೆಗಳನ್ನು ಮುಚ್ಚಿ, ಕೆರೆ ಅಂಚಿನಿAದ ೩೦ ಮೀ ಒಳಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಮಾಡಬಾರದು ಎಂಬ ನಿಯಮವಿದ್ದರೂ, ಕೆರೆಯ ಅಂಗಳದಲ್ಲೇ ಸರಿ ಸುಮಾರು ೨೫೦ ರಿಂದ ೩೦೦ ಮೀಟರ್ ಉದ್ದದ ಹಾಗೂ ಅಂದಾಜು ೩೦ ರಿಂದ ೫೦ ಅಡಿಗಳಷ್ಟು ಅಗಲದ ರಸ್ತೆ ರಾಜಾರೋಷವಾಗಿ ನಿರ್ಮಾಣ ಮಾಡಿ ಕ್ರಷರ್ ಮಾಲೀಕರ ಕಲ್ಲು ಮತ್ತು ಜಲ್ಲಿ ಸಾಗಾಣಿಕೆ ಮಾಡುವ ಭಾರೀ ಗಾತ್ರದ ವಾಹನಗಳು ರಾಜಾರೋಷವಾಗಿ ಓಡಾಡುತ್ತಿವೆ.

ಬಾಕ್ಸ್

ಶ್ರೀಕಂಠಪುರ ಕೆರೆಯ ಸುತ್ತಲೂ ಬೆಟ್ಟ ಗುಟ್ಟಗಳಿದ್ದು, ಮಳೆ ಬಂದರೆ ನೀರು ಕೆರೆ ತುಂಬುತ್ತಿತ್ತು. ವರ್ಷ ಪೂರ್ತಿ ಕೆರೆಯಲ್ಲಿ ನೀರು ಇರುತ್ತಿದ್ದವು. ಸುತ್ತಮುತ್ತಲಿನ ಗ್ರಾಮಗಳಿಗೆ ಈ ಕೆರೆಯೇ ಆಧಾರವಾಗಿತ್ತು. ದನಕರುಗಳಿಗೆ ನೀರು ಅಭಾವ ಇರುತ್ತಿರಲಿಲ್ಲ. ಈಗ ಕೆರೆಯ ರಾಜಕಾಲುವೆ ಮುಚ್ಚಲಾಗಿದೆ. ಕೆರೆ ಕಟ್ಟೆಯು ಹೊಡೆದು ಹಾಕಿರುವುದರಿಂದ ಕೆರೆಯು ಆಕಾರ ಕಳೆದುಕೊಂಡಿದೆ. ನೀರು ಬರಿದಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಕೆರೆಯನ್ನು ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.

ಕೋಟ್

ಕೆರೆಗಳನ್ನು ಉಳಿಸಬೇಕು ಎಂದು ಸರ್ಕಾರ ಹೇಳುತ್ತಿದೆ. ಆದರೆ ಇರುವ ಕೆರೆಗಳನ್ನು ಒತ್ತುವರಿ ಸೇರಿದಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾಲುವೆ ಮುಚ್ಚಿ ಕಟ್ಟೆಗಳನ್ನು ಹೊಡೆದು ಗಣಿ ಮಾಫಿಯಾಗಳು ರಸ್ತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಶ್ರೀಕಂಠಪುರ ಕೆರೆ ಆಕಾರವನ್ನು ಕಳೆದುಕೊಂಡಿದೆ. ಇದನ್ನು ನೋಡಿದರೆ ಸ್ಥಳೀಯ ಆಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕ, ಸಂಸದರ ಕುಮ್ಮಕ್ಕಿನಿಂದ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈಗಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಕೆರೆಯನ್ನು ಆಕ್ರಮಿಸಿ ಗಣಿಮಾಫಿಯಾಗಳು ಗಣಿಗಾರಿಕೆ ನಡೆಸುವಲ್ಲಿ ಯಾವುದೇ ಸಂದೇಹವಿಲ್ಲ. ಜಿಲ್ಲಾ ಕೆರೆ ನಿರ್ವಹಣಾ ಸಮಿತಿ ಅಧ್ಯಕ್ಷರೂ ಆದ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅಕ್ರಮವಾಗಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸಿ ಸರ್ಕಾರಿ ಕೆರೆಯನ್ನು ಸಂರಕ್ಷಿಸಬೇಕು ಇಲ್ಲವಾದಲ್ಲಿ ಆಮ್ ಆದ್ಮಿ ಪಕ್ಷವು ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

-ವಿ.ರಮೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಆಮ್ ಆದ್ಮಿ ಪಕ್ಷ

ಚಿತ್ರ ೩೧ ಕೆ.ಎಲ್.ಆರ್. ೦೨ : ಶ್ರೀಕಂಠಪುರ ಕೆರೆಯಲ್ಲಿ ಅಕ್ರಮವಾಗಿ ಗಣಿ ಮಾಫಿಯಾಗಳು ರಸ್ತೆಯನ್ನು ನಿರ್ಮಾಣ ಮಾಡಿರುವುದು.

ಚಿತ್ರ ೩೧ ಕೆ.ಎಲ್.ಆರ್. ೦೨ಎ : ವಿ.ರಮೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಆಮ್ ಆದ್ಮಿ ಪಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net