ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಶ್ರೀ ಪ್ರತ್ಯಂಗಿರಾ ಹೋಮ

homa
: ತರೀಕೆರೆ ತಾಲೂಕಿನ ಕಟ್ಟೇಹೊಳೆ ಗ್ರಾಮದ ಶ್ರೀ ಶನೈಶ್ಚರ ಸ್ವಾಮಿ ದೇಗುಲದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ ಶ್ರೀ ಪ್ರತ್ಯಂಗಿರಾ ಹೋಮ.
Published on

ತರೀಕೆರೆ: ತಾಲೂಕಿನ ಕಟ್ಟೇಹೊಳೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಶನಿವಾರ ಕಡೆ ಶ್ರಾವಣ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇಗುಲದ ಪ್ರಧಾನ ಅರ್ಚಕ ಆರ್.ಬಲರಾಮ ನೇತೃತ್ವದಲ್ಲಿ ಬೆಳಗ್ಗೆ ಶ್ರೀಸ್ವಾಮಿಗೆ ಹಾಲು, ತುಪ್ಪ, ಎಳೆನೀರು, ಜೇನುತುಪ್ಪ, ಸುಗಂಧ ದ್ರವ್ಯಾದಿಗಳಿಂದ ಅಭಿಷೇಕ ನೆರವೇರಿಸಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು.
ದೇಗುಲದಲ್ಲಿ ಕೊನೆಯ ಶ್ರಾವಣದ ಅಂಗವಾಗಿ ನವಗ್ರಹ ಹೋಮ, ಶ್ರೀ ಶನೈಶ್ಚರ ಹೋಮ, ಕುಂದಾಪುರದ ಶ್ರೀ ಅನಿಲ್ ಭಟ್ಟರ ನೇತೃತ್ವದಲ್ಲಿ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಶ್ರೀ ಪ್ರತ್ಯಂಗಿರಾ ಹೋಮ ನೆರವೇರಿಸಲಾಯಿತು.
ವಿವಿಧ ಹೋಮಗಳ ಬಳಿಕ ಪೂರ್ಣಾಹುತಿ, ದಿಗ್ಬಲಿ ನಡೆಸಿ ತರೀಕೆರೆ, ಬಾವಿಕೆರೆ, ದುಗ್ಲಾಪುರ, ಎಂ.ಸಿ.ಹಳ್ಳಿ, ಬೇಲೇನಹಳ್ಳಿ, ಜೋಡಿ ಕೋಡಿಹಳ್ಳಿ, ಇಟ್ಟಿಗೆ, ರಾಮನಹಳ್ಳಿ, ಲಕ್ಕೇನಹಳ್ಳಿ ಇನ್ನಿತರ ಕಡೆಯಿಂದ ಭಕ್ತರು ಹೋಮದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಸಂಜೆ ಸೂರ್ಯಸ್ತಮಾನದವರೆಗೆ ಶ್ರೀ ಶನೈಶ್ಚರ ಸ್ವಾಮಿಯವರ ಕಥೆ ಹಾಗೂ ಅಖಂಡ ಭಜನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net