ಶ್ರೀ ಕೃಷ್ಣ-ಬಲರಾಮ ರಥಯಾತ್ರೆ

12
Published on

ಇಸ್ಕಾನ್ ವತಿಯಿಂದ ನಗರದಲ್ಲಿ ಶನಿವಾರ ಭಕ್ತಿಪೂರ್ವಕವಾಗಿ 27ನೇ ವಾರ್ಷಿಕ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ ಜರುಗಿತು. ರಥಯಾತ್ರೆಯಲ್ಲಿ ಅನೇಕ ಸಾಂಸ್ಕೃತಿಕ ಆಕರ್ಷಣೆಗಳು, ಮಂಗಳವಾದ್ಯ ಸಹಿತ ಇಸ್ಕಾನ್ ಭಕ್ತರಿಂದ ಸಂಕೀರ್ತನೆ ನಡೆಯಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆರಂಭವಾದ ರಥಯಾತ್ರೆ, ಗಾಂಧಿ ಚೌಕ, ಸಯ್ಯಜಿ ರಾವ್ ರಸ್ತೆ, ಚಿಕ್ಕ ಗಡಿಯಾರ, ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ನ್ಯೂ ಕಾಂತರಾಜ್ ಅರಸು ರಸ್ತೆ, ಜಯನಗರ 2ನೇ ಮುಖ್ಯರಸ್ತೆಯ ಮೂಲಕ ಇಸ್ಕಾನ್ ದೇವಸ್ಥಾನ ತಲುಪಿತು. ಶ್ರೀಕೃಷ್ಣ ಬಲರಾಮರ ವಿಗ್ರಹವನ್ನು ಕೂರಿಸಿರುವ 35 ಅಡಿ ಎತ್ತರದ ರಥದ ಹಿಂದೆ ನೂರಾರು ಭಕ್ತರು ಸಾಗಿದರು.

ರಥೋತ್ಸವದುದ್ದಕ್ಕೂ ಶ್ರೀಕೃಷ್ಣ -ಬಲರಾಮರಿಗೆ ಜೈಕಾರ ಮೊಳಗಿದವು. ಭಕ್ತರು ‘ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ಹರೇ ಹರೇ’ ಹೇಳುವ ಮೂಲಕ ಭಕ್ತಿಯ ಭಾವ ಮೆರೆದರು. ಇದೇ ವೇಳೆ 30 ಸಾವಿರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಇದಕ್ಕೂ ಮೊದಲು ಇಸ್ಕಾನ್ ಮೈಸೂರು ಅಧ್ಯಕ್ಷ ಶ್ರೀ ಸ್ತೋಕ ಕೃಷ್ಣಸ್ವಾಮಿ ಅಧ್ಯಕ್ಷತೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ರಥಯಾತ್ರೆಗೆ ಚಾಲನೆ ನೀಡಿದರು.

ಬೆಂಗಳೂರು ಇಸ್ಕಾನ್ ಉಪಾಧ್ಯಕ್ಷ ಶ್ರೀಧಾಮ ಕೃಷ್ಣದಾಸ, ಇಸ್ಕಾನ್ ಮೈಸೂರು ಉಪಾಧ್ಯಕ್ಷ ಎಚ್.ಜಿ.ಕಾರುಣ್ಯ ಸಾಗರ, ಆಂಧ್ರಪ್ರದೇಶ ವಿಜಯವಾಡದ ಹರೇ ಕೃಷ್ಣ ಆಂದೋಲನದ ಅಧ್ಯಕ್ಷ ಎಚ್.ಜಿ.ವಂಶೀಧರ ದಾಸ, ಭಿಲಾಯಿ ಹರೇ ಕೃಷ್ಣ ಆಂದೋಲನದ ಅಧ್ಯಕ್ಷ ವ್ಯೋಮಪಾದ ದಾಸ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net