ಶ್ರಮಿ ಜೀವಿಗಳಿಂದ ಅಹೋರಾತ್ರಿ ಪ್ರತಿಭಟನೆ

Published on

ಮದ್ದೂರು: ಕಾರ್ಮಿಕ ಜನವಿರೋಧಿ ನೀತಿಗಳನ್ನು ಕೈಬಿಟ್ಟು, ಅವರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರಮಿ ಜೀವಿಗಳಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ತಾಲೂಕು ಸಂಚಾಲಕ ಪ್ರದೀಪ್ ತಿಳಿಸಿದರು.

ಪಟ್ಟಣದ ಕೆಮ್ಮಣ್ಣುನಾಲೆ ಸರ್ಕಲ್‌ನಲ್ಲಿ ಅಹೋರಾತ್ರಿ ಧರಣಿ ಸಂಬಂಧ ಭಾನುವಾರ ಹಮ್ಮಿಕೊಂಡಿದ್ದ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನು ಜಾರಿಯಾಗಬೇಕು. ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿಭತ್ಯೆಯೊಂದಿಗೆ ಎಲ್ಲ ವಿಭಾಗಗಳಲ್ಲಿನ ಅಸಂಘಟಿತ ಕಾರ್ಮಿಕರಿಗೆ ಸಮಾನ ಕನಿಷ್ಠ ವೇತನ 31,566 ರೂ. ಜಾರಿ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮಾ.3ರಂದು ಗ್ರಾಪಂ ನೌಕರರಿಂದ, ಮಾ.4 ರಂದು ಅಕ್ಷರ ದಾಸೋಹ ನೌಕರರಿಂದ, ಮಾ.5 ರಂದು ಕಟ್ಟಡ ಕಾರ್ಮಿಕ ನಿರ್ಮಾಣ ಕಾರ್ಮಿಕರಿಂದ, ಮಾ.6 ರಂದು ಸಂಘಟಿತ, ಅಸಂಘಟಿತ ಕಾರ್ಮಿಕರಿಂದ ಹಾಗೂ ಮಾ.7 ರಂದು ಅಂಗನವಾಡಿ ನೌಕರರಿಂದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಮದ್ದೂರು ವಿವಿಧೆಡೆಗಳಲ್ಲಿ ಹಾಗೂ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಚಾರಾಂದೋಲನ ನಡೆಸಲಾಯಿತು. ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಜಯಶೀಲಾ, ಮುಖಂಡರಾದ ರತ್ನಮ್ಮ, ಕೆ.ಪಿ.ಮಮತಾ, ರೋಹಿಣಿ, ಜಯಶೀಲಾ, ರಾಧಾ, ಕಟ್ಟಡ ಸಂಘದ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net